ಉಡುಪಿ : ಜನವರಿ 04:ರಾಜ್ಯ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಯೋಜನೆಯಾದ ‘ಅಕ್ಕ ಪಡೆ’ಗೆ ಉಡುಪಿ ಜಿಲ್ಲೆಯ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನವರಿ 03ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಅಕ್ಕ ಪಡೆ ತಂಡಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಕ್ಕ ಪಡೆಯ ಉದ್ದೇಶ ಏನು??
ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಈ ಪಡೆ ತಕ್ಷಣದ ರಕ್ಷಣೆ ನೀಡಲಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹೇಗೆ ಕಾರ್ಯಚರಿಸಲಿದೆ ಅಕ್ಕಪಡೆ?
ಶಾಲೆ, ಕಾಲೇಜು, ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು ಮತ್ತು ಸಹಾಯವಾಣಿಗಳ ಬಗ್ಗೆ ಈ ತಂಡವು ಜಾಗೃತಿ ಮೂಡಿಸಲಿದೆ. ಈ ತಂಡವು ಮಕ್ಕಳ ಕಲ್ಯಾಣ ಸಮಿತಿ (CWC), ಮಹಿಳಾ ಸಹಾಯವಾಣಿಗಳು, ಎನ್‌ಜಿಒಗಳು ಮತ್ತು ಕಾನೂನು ನೆರವು ಕೇಂದ್ರಗಳೊಂದಿಗೆ ಸಮನ್ವಯ ಸಾಧಿಸಿ ಸಂತ್ರಸ್ತರಿಗೆ ಕೌನ್ಸೆಲಿಂಗ್ ಮತ್ತು ಪುನರ್ವಸತಿ ಕಲ್ಪಿಸಲು ಸಹಕರಿಸಲಿದೆ.
ಅಕ್ಕ ಪಡೆಯ ತಂಡಗಳು ಜಿಲ್ಲೆಯ ಶಾಲೆ ಮತ್ತು ಕಾಲೇಜುಗಳು, ಬಾಲಕಿಯರ ಮತ್ತು ಮಹಿಳಾ ಹಾಸ್ಟೆಲ್‌ಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆಗಳು ಮತ್ತು ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಂತಹ ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗಲಿವೆ.
ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ?
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆ ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆಯವರೆಗೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮಕ್ಕಳ ಸಹಾಯವಾಣಿ 1098 ಮಹಿಳಾ ಸಹಾಯವಾಣಿ 181 ಪೋಲಿಸ್ ಸಹಾಯವಾಣಿ 112ಈ ಸಂಖ್ಯೆಗಳಿಗೆ ಕರೆ ಮಾಡುವುದರ ಮುಖಾಂತರ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಅಕ್ಕಾ ಪಡೆಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.






