ಉಡುಪಿ: ಡಿಸೆಂಬರ್ 23:ಡಿ.25ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬೈಂದೂರಿನಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ 14 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಧ್ಯಾಹ್ನ ಗಂಟೆ 2.00ಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಬೈಂದೂರಿನಲ್ಲಿ ನಡೆಯಲಿರುವ ‘ಸಂಸದ್ ಖೇಲ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಜೆ ಗಂಟೆ 5.00ಕ್ಕೆ ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಶಾಸಕ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಕಾರ್ಕಳದ ಅಟಲ್ ಪಾರ್ಕ್ ನಲ್ಲಿ ಅಟಲ್ ಪ್ರತಿಮೆಗೆ ಮಾಲಾರ್ಪಣೆಗೈದು ‘ಅಟಲ್ ಸ್ಮರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿ.27ರಂದು ಸಂಜೆ ಗಂಟೆ 7.00ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಕಾಪು ಮಂಡಲದ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಕಾಪು ಕಡಲ ಕಿನಾರೆಯಲ್ಲಿ ನಡೆಯಲಿರುವ ‘ಕಾಪು ಕಡಲ ಪರ್ಬ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಿ.28ರಂದು ಬಿಜೆಪಿ ಕಾರ್ಕಳ ಮಂಡಲದ ನೇತೃತ್ವದಲ್ಲಿ ಸಚ್ಚರಿಪೇಟೆಯಲ್ಲಿ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ ಅಧಿಕೃತ ನೇರ ಪ್ರಸಾರವನ್ನು ವೀಕ್ಷಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಿ.24ರಂದು ಸಂಜೆ ಗಂಟೆ 6.00ಕ್ಕೆ ಬಿಜೆಪಿ ಉಡುಪಿ ನಗರ ಮಂಡಲದ ವತಿಯಿಂದ ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ನೇತೃತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟ ‘ಅಟಲ್ ಟ್ರೋಫಿ’ ನಡೆಯಲಿದೆ. ಬೆಳಿಗ್ಗೆ ಗಂಟೆ 9.00ರಿಂದ ಮಹಿಳಾ ವಿಭಾಗದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಕೂಟ ನಡೆಯಲಿದೆ. ಡಿ.25ರಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಸಹಯೋಗದೊಂದಿಗೆ ಬ್ರಹ್ಮಾವರ ನಂದಿಗುಡಿಯ ಬಳಿ ಪ.ಜಾ. ಸಮುದಾಯದ 14 ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಸಹಿತ ಜ.17ರಂದು ನಡೆಯುವ ಕರಾವಳಿಯ ನಾಡ ಹಬ್ಬ ‘ಉಡುಪಿ ಶೀರೂರು ಮಠದ ಪರ್ಯಾಯೋತ್ಸವ’ದ ಸಂಬಂಧಿತ ಎಲ್ಲ ಕಾರ್ಯಕ್ರಮಗಳಲ್ಲಿ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ವಿಸ್ತೃತ ಮಾಹಿತಿ ನೀಡಿ, ದ್ವೇಷ ಭಾಷಣದ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರ ಸದನದಲ್ಲಿ ಮಂಡಿಸಿರುವ ಮಸೂದೆಯು ದುರುದ್ದೇಶದಿಂದ ಕೂಡಿದ್ದು, ಇದರ ವಿರುದ್ಧ ಜಿಲ್ಲೆಯ ಎಲ್ಲ ಮಂಡಲಗಳ ನೇತೃತ್ವದಲ್ಲಿ ಆಯಾ ತಾಲೂಕು ಕಛೇರಿಗೆ ಶೀಘ್ರ ಮನವಿಯನ್ನು ಸಲ್ಲಿಸಬೇಕು ಹಾಗೂ ಎಸ್ಐಆರ್ ಬಗ್ಗೆ ಮಂಡಲ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸಹಿತ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.






