ಡಿಸೆಂಬರ್ 21:ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತೆ ಎನ್ನುವ ವರದಿಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಧಾರ ರಹಿತ ಎಂದು ತಳ್ಳಿ ಹಾಕಿದೆ.
ಸದ್ಯ ದೇಶದಲ್ಲಿರುವ ಮೊಟ್ಟೆಗಳು ಸೇವನೆಗೆ ಸುರಕ್ಷಿತವಾಗಿವೆ ಎಂದು ಸ್ಪಷ್ಟನೆ ನೀಡಿದೆ. ಆ ಮೂಲಕ ಜನರ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.
ಈ ಕುರಿತಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಶನಿವಾರ ಮಾಧ್ಯಮ ಪ್ರಕರಣೆ ಹೊರಡಿಸಿದ್ದು, ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತೆ ಎನ್ನುವ ವರದಿಗಳು ಅವೈಜ್ಞಾನಿಕವಾಗಿದ್ದು, ದಾರಿತಪ್ಪಿಸುವ ಮೂಲಕ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟು ಮಾಡುತ್ತಿದ್ದು, ಅಂತಹ ವರದಿಗಳನ್ನು ನಂಬದಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದೆ
ಎಗ್ಗೋಜ್ ನ್ಯೂಟ್ರಿಷನ್ ಕಂಪನಿಯ ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಇದೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಇದು ಸಾರ್ವಜನಿಕರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡ ನಿಯಮ 2011ರ ಅಡಿಯಲ್ಲಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ನೈಟ್ರೋಫ್ಯೂರಾನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗಾಗಿ ಮೊಟ್ಟೆಗಳಲ್ಲಿ ಕ್ಯಾನ್ಸರ್ ಅಂಶ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಆಗಿದೆ.
ಮೊಟ್ಟೆಗಳು ಅಸುರಕ್ಷಿತವೆಂಬುವುದು ಒಂದೆರಡು ಪ್ರಾಯೋಗಿಕ ಸಂಶೋಧನೆಗಳನ್ನು ವೈಜ್ಞಾನಿಕವಾಗಿ ಸರಿಯಲ್ಲವೆಂದು ಸಂಸ್ಥೆ ಹೇಳಿದ್ದು, ಆಹಾರ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಮೊಟ್ಟೆಗಳನ್ನು ಉತ್ಪಾದಿಸಿ ಸೇವಿಸಿದಾಗ ಅವು ಸಮತೋಲಿತ ಆಹಾರದ ಸುರಕ್ಷಿತ, ಪೌಷ್ಟಿಕ ಮತ್ತು ಮೌಲ್ಯಯುತ ಅಂಶವಾಗಿ ಉಳಿಯುತ್ತವೆ ಎಂದು FSSAI ಪುನರುಚ್ಚರಿಸಿದೆ.





