ಬೆಂಗಳೂರು, ಡಿಸೆಂಬರ್ 19, 2025- ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಆಯೋಜಿಸಿದ್ದ ‘ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್‌ಶಿಪ್-2025’ ಭಾನುವಾರ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆದ ಅದ್ಧೂರಿ ಫೈನಲ್ ಪಂದ್ಯದೊಂದಿಗೆ ತೆರೆಕಂಡಿತು. ನವೆಂಬರ್ 16ರಂದು ಆರಂಭವಾಗಿದ್ದ ಈ ಒಂದು ತಿಂಗಳ ಟೂರ್ನಮೆಂಟ್‌ನಲ್ಲಿ 12 ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ತಂಡಗಳು ಭಾಗವಹಿಸಿದ್ದವು. ಈ ಟೂರ್ನಮೆಂಟ್‌ನಲ್ಲಿ ಒಟ್ಟು 16 ರೋಚಕ ಟಿ-20 ಪಂದ್ಯಗಳು ನಡೆದವು.
ನಾಲ್ಕು ಗುಂಪು ಹಂತದ ಈ ಟೂರ್ನಿಯಲ್ಲಿ, ಪ್ರತಿ ತಂಡಕ್ಕೆ ತಲಾ ಎರಡು ಲೀಗ್ ಪಂದ್ಯಗಳನ್ನು ಆಡುವ ಅವಕಾಶ ನೀಡಲಾಗಿತ್ತು. ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಾಲ್ಕು ತಂಡಗಳು ಡಿಸೆಂಬರ್ 13 ರಂದು ನಡೆದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದವು. ಇಂದು ನಡೆದ ಫೈನಲ್ ಪಂದ್ಯದೊಂದಿಗೆ ಈ ಪಂದ್ಯಾವಳಿ ಮುಕ್ತಾಯವಾಯಿತು.
ರೋಚಕತೆಯಿಂದ ಕೂಡಿದ್ದ ಫೈನಲ್ ಹಣಾಹಣಿಯಲ್ಲಿ ಮಣಿಪಾಲ್ ಹಾಸ್ಪಿಟಲ್ಸ್ ಮತ್ತು ಕೆಪಿಎಂಜಿ ತಂಡಗಳು ಸೆಣಸಾಡಿದವು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಣಿಪಾಲ್ ಹಾಸ್ಪಿಟಲ್ಸ್, ಉತ್ತಮವಾಗಿ ಆಟವಾಡುವ ಮೂಲಕ ಮೂಲಕ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಕೆಪಿಎಂಜಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಮಣಿಪಾಲ್ ಹಾಸ್ಪಿಟಲ್ಸ್ ತಂಡವು, 2025ರ ಮಾಹೆ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ (ನಿವೃತ್ತ) ಅವರು ಭಾಗವಹಿಸಿದ್ದರು. ಮಾಹೆ ಬೆಂಗಳೂರು ಹಾಗೂ ಎಂಎಲ್‌ಎಚ್‌ಎಸ್‌ನ ಸಹ ಕುಲಪತಿ ಪ್ರೊ. ಮಧು ವೀರರಾಘವನ್, ಮಾಹೆ ಮಣಿಪಾಲ್ ಸಿಒಒ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಣಿಪಾಲ್ ಕ್ಲಸ್ಟರ್ ಸಿಒಒ ಡಾ. ಸುಧಾಕರ್ ಕಂಟಿಪುಡಿ, ಮಾಹೆ ಮಣಿಪಾಲ್ ಕಾರ್ಪೋರೇಟ್ ವಿಭಾಗದ ಮುಖ್ಯಸ್ಥರಾದ ಹರೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣ್ಯರನ್ನು ಸ್ವಾಗತಿಸಿದ ಮಾಹೆ ಬೆಂಗಳೂರಿನ ಅಡಿಷನಲ್ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಪ್ರಭು ಅವರು, ಟೂರ್ನಿಯಲ್ಲಿ ಕಂಡುಬಂದ ಕ್ರೀಡಾ ಸ್ಫೂರ್ತಿ ಮತ್ತು ಕಾರ್ಪೊರೇಟ್ ಸಹಭಾಗಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ನಡೆದ ಈ ಕಾರ್ಪೋರೇಟ್ ಕ್ರಿಕೆಟ್ ಟೂರ್ನಿಯ ಯಶಸ್ಸಿನ ಬಗ್ಗೆ ಮಾತನಾಡಿದ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ‘ಪ್ರತಿ ವರ್ಷವೂ ಮಾಹೆ ಒಂದು ಧ್ಯೇಯವನ್ನು ಅಳವಡಿಸಿಕೊಳ್ಳುತ್ತದೆ. ಅದರಂತೆ 2025ರಲ್ಲಿ ‘ಶ್ರೇಷ್ಠತೆ ಹಾಗೂ ಉದ್ಯಮ-ಶೈಕ್ಷಣಿಕ ಸಹಯೋಗ’ ಎಂಬ ಧ್ಯೇಯವನ್ನು ನಾವು ಹೊಂದಿದ್ದೆವು. ಅದರ ಭಾಗವಾಗಿಯೇ ಈ ಕ್ರಿಕೆಟ್ ಪಂದ್ಯವಳಿ ನಡೆದಿದ್ದು, ಅಂದುಕೊಂಡಂತೆಯೇ ಇದು ಅತ್ಯಂತ ಯಶಸ್ವಿಯಾಗಿದೆ. ಇದು ಯಶಸ್ವಿಯಾಗಲು ಶ್ರಮಿಸಿದ ಆಯೋಜಕರಿಗೆ ಅಭಿನಂದನೆಗಳು. ಫೈನಲ್ ಪಂದ್ಯದಲ್ಲಿ ಸೆಣಸಾಡಿದ ಕೆಪಿಎಂಜಿ ಹಾಗೂ ಮಣಿಪಾಲ್ ಹಾಸ್ಪಿಟಲ್ಸ್ ತಂಡಗಳಿಗೆ ವಿಶೇಷ ಧನ್ಯವಾದಗಳು’ ಎಂದು ಹೇಳಿದರು.
ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಎರಡು ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮಾಹೆ ಬೆಂಗಳೂರು ಸಹ ಕುಲಪತಿ ಪ್ರೊ. ಮಧು ವೀರರಾಘವನ್ ಅವರು, ʼಕ್ರಿಕೆಟ್ ರಿಚಿ ಬೆನೋಡ್ ಅವರು ಮಾರ್ಕ್ ನಿಕೋಲಸ್ ಅವರಿಗೆ ಒಮ್ಮೆ ‘ಟೆಸ್ಟ್ ಹಾಗೂ ಟಿ-20 ಕ್ರಿಕೆಟ್‌ಗೆ ಏನು ವ್ಯತ್ಯಾಸ?’ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ರಿಚಿ ಬೆನೋಡ್, ‘ಟೆಸ್ಟ್ ಪಂದ್ಯ ನೋಡಲು ತಂದೆ ಮಗನನ್ನು ಕರೆದೊಯ್ದರೆ, ಟಿ-20 ಪಂದ್ಯಕ್ಕೆ ಮಗನೇ ತಂದೆಯನ್ನು ಕರೆದುಕೊಂಡು ಹೋಗುತ್ತಾನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಮುಂದಿನ ವರ್ಷಗಳಲ್ಲಿ ಇಲ್ಲಿಗೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ಬಂದು ಪಂದ್ಯ ವೀಕ್ಷಿಸಲಿʼ ಎಂದು ಆಶಯ ವ್ಯಕ್ತಪಡಿಸಿದರು.
ಮಣಿಪಾಲ್ ಹಾಸ್ಪಿಟಲ್ಸ್ ತಂಡವು ಚಾಂಪಿಯನ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ವಿಜಯೋತ್ಸಾಹ ಆಚರಿಸಿತು. ಇದರೊಂದಿಗೆ ಈ ರೋಚಕ ಟೂರ್ನಿಗೆ ವರ್ಣರಂಜಿತ ತೆರೆಬಿದಿತ್ತು. ಕಾರ್ಪೊರೇಟ್ ವಿಭಾಗದ ಮುಖ್ಯಸ್ಥ ಹರೀಶ್ ಕುಮಾರ್ ವಂದನಾರ್ಪಣೆ ಮಾಡಿದರು. 2025ರ ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಡೆಲಾಯ್ಟ್, EY, HPE, J. P. ಮಾರ್ಗನ್, KPMG, ಮಣಿಪಾಲ್ ಆಸ್ಪತ್ರೆಗಳು, ಮೈಕ್ರೋಸಾಫ್ಟ್, ಮೈಕ್ರೋಲ್ಯಾಂಡ್, ನೊವೊ ನಾರ್ಡಿಸ್ಕ್, ಸೇಲ್ಸ್‌ಫೋರ್ಸ್, ಥಾಮ್ಸನ್ ರಾಯಿಟರ್ಸ್ ಮತ್ತು ಯೂನಿಸಿಸ್ ತಂಡಗಳಿಗೆ, ಆಯೋಜಕ ಸಮಿತಿ, ಪಂದ್ಯದ ಅಧಿಕಾರಿಗಳು ಹಾಗೂ ಮಾಹೆ ಆಡಳಿತ ಮಂಡಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.





