ಮಣಿಪಾಲ,: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು ಹಾಗೂ ಕ್ರೀಡಾ ಮಂಡಳಿಯ ಪ್ರಧಾನ ಸಂಯೋಜಕರಾದ ಡಾ. ಉಪೇಂದ್ರ ನಾಯಕ್ ಅವರನ್ನು ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟವು (ಎಐಯು) ‘ಅಖಿಲ ಭಾರತ ವಲಯ ಮಟ್ಟದ ಅಂತರ-ವಿಶ್ವವಿದ್ಯಾಲಯಗಳ ಮಹಿಳಾ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ಗೆ (ಪಶ್ಚಿಮ ವಲಯ) ವೀಕ್ಷಕರನ್ನಾಗಿ ನೇಮಿಸಿದೆ.
ಈ ಪಂದ್ಯಾವಳಿಯು ಡಿಸೆಂಬರ್ 16 ರಿಂದ 19 ರವರೆಗೆ ಸೂರತ್‌ನ ‘ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ’ದಲ್ಲಿ ನಡೆಯಲಿದೆ. ಎಐಯು ವೀಕ್ಷಕರಾಗಿ ಡಾ. ನಾಯಕ್ ಅವರು ಪಂದ್ಯಾವಳಿಯ ನಿರ್ವಹಣೆ, ಕ್ರೀಡಾ ನಿಯಮಗಳ ಪಾಲನೆ ಹಾಗೂ ಆಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಪಂದ್ಯಾವಳಿಯ ವೇಳೆ ಯಾವುದೇ ತಾಂತ್ರಿಕ ಗೊಂದಲಗಳು ಉಂಟಾದಲ್ಲಿ ಮೇಲ್ಮನವಿ ಸಮಿತಿಯೊಂದಿಗೆ ಚರ್ಚಿಸಿ ಬಗೆಹರಿಸುವ ಜವಾಬ್ದಾರಿಯನ್ನು ಅವರು ವಹಿಸಲಿದ್ದಾರೆ.
ಕ್ರೀಡಾ ಪಂದ್ಯಾವಳಿಗಳಲ್ಲಿ ಪಾರದರ್ಶಕತೆ ಮತ್ತು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಎಐಯು ತಟಸ್ಥ ವೀಕ್ಷಕರನ್ನು ನೇಮಿಸುತ್ತದೆ. ಕ್ರೀಡಾ ಕ್ಷೇತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಡಾ. ನಾಯಕ್ ಅವರು ಹೊಂದಿರುವ ಅಪಾರ ಅನುಭವವನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ. ಪಂದ್ಯಾವಳಿ ಮುಗಿದ 21 ದಿನಗಳ ಒಳಗಾಗಿ ಅವರು ಆಡಳಿತಾತ್ಮಕ ಮತ್ತು ತಾಂತ್ರಿಕ ಅಂಶಗಳನ್ನೊಳಗೊಂಡ ವರದಿಯನ್ನು ಎಐಯುಗೆ ಸಲ್ಲಿಸಲಿದ್ದಾರೆ.
ಕ್ರೀಡಾ ಆಡಳಿತದಲ್ಲಿ ಹಾಗೂ ಅಂತರ-ವಿಶ್ವವಿದ್ಯಾಲಯ ಕ್ರೀಡಾ ಸಂಸ್ಕೃತಿಯನ್ನು ದೇಶಾದ್ಯಂತ ಬೆಳೆಸುವಲ್ಲಿ ಮಾಹೆ ಹೊಂದಿರುವ ಬದ್ಧತೆಯನ್ನು ಈ ನೇಮಕಾತಿಯು ಎತ್ತಿ ತೋರಿಸುತ್ತದೆ. ಪಶ್ಚಿಮ ವಲಯದ ಪ್ರಮುಖ ವಿಶ್ವವಿದ್ಯಾಲಯಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ಮಹಿಳಾ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ರಮ ವೇದಿಕೆಯಾಗಲಿದೆ.






