ಕಾರ್ಕಳ: ಡಿಸೆಂಬರ್ 06:ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನ ಕಟ್ಟೆಯಯವರೆಗೆ (45 ಕಿ.ಮೀ.)ರಾಷ್ಟ್ರೀಯ ಹೆದ್ದಾರಿ _ 169 ಚತುಷ್ಪಥ ಕಾಮಗಾರಿ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಹಳೆ ಬಸ್ಸು ತಂಗುದಾಣಗಳು ಧರಾಶಾಯಿ
ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಬಸ್ಸುತಂಗುದಾಣಗಳನ್ನು ಕೆಡವಿ ಹಾಕಲಾಗಿತ್ತು
ಹೊಸ ಬಸ್ಸು ನಿಲ್ದಾಣಗಳು ನಿರ್ಮಾಣವಾಗುವವರೆಗೆ ಕನಿಷ್ಠಪಕ್ಷ ತಾತ್ಕಾಲಿಕ ಬಸ್ಸು ತಂಗುದಾಣಗಳನ್ನು ನಿರ್ಮಾಣ ಮಾಡಿಕೊಡಿ ಎನ್ನುವ ನಾಗರಿಕರ ಬೇಡಿಕೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಿವಿಗೊಡದೆ, ಕಳೆದ 3 ವರ್ಷಗಳಿಂದ ಸಾಣೂರು ಗ್ರಾಮದ ಬಸ್ಸು ಪ್ರಯಾಣಿಕರು ಬಿಸಿಲು ಮಳೆ ಗಾಳಿಗೆ ಮೈಯೊಡ್ಡಿ ರಸ್ತೆ ಮಧ್ಯದಲ್ಲಿ ಅಸುರಕ್ಷಿತವಾಗಿ ಬಸ್ಸು ಕಾಯಬೇಕಾದ ದುರ್ಗತಿ ಒದಗಿ ಬಂದಿತ್ತು.
ಈ ಬಗ್ಗೆ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಜನ ಪ್ರತಿನಿಧಿಗಳಿಗೆ ಮನವಿ ನೀಡಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ರಿಕ್ಷಾ ಚಾಲಕರಿಂದ ತಾತ್ಕಾಲಿಕ ಬಸ್ಸು ತಂಗುದಾಣ ನಿರ್ಮಾಣ
ದಿನಂಪ್ರತಿ ರಸ್ತೆ ಮಧ್ಯದಲ್ಲಿಯೇ ಬಿಸಿಲು ಮಳೆಗೆ ಬಸ್ಸು ಕಾಯಬೇಕಾದ ಜನರ ದುರ್ಗತಿ ನೋಡಿ ಸ್ಥಳೀಯ ರಿಕ್ಷಾ ಚಾಲಕ ಮತ್ತು ಮಾಲಕರು ಜೊತೆಗೂಡಿ ತಾತ್ಕಾಲಿಕ ಬಸ್ಸು ತಂಗುದಾಣವನ್ನು ನಿರ್ಮಾಣ ಮಾಡಿ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿ ಸವಾಲು ಒಡ್ಡಿದ್ದರು.
ಸಂಸದರಿಂದ ಹೆದ್ದಾರಿ ಕಾಮಗಾರಿ ಪರಿಶೀಲನೆ
ಇತ್ತೀಚೆಗೆ ಉಡುಪಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರು ಸಾರ್ವಜನಿಕರ ಒತ್ತಡಕ್ಕೆ ಮಣಿದು ಬಾಕಿ ಉಳಿದಿರುವ ಹೆದ್ದಾರಿ ಕಾಮಗಾರಿಗಳ ಪರಿಶೀಲನೆ ಮಾಡುವಾಗ ಡಿಸೆಂಬರ್ ಮೊದಲ ವಾರದ ಒಳಗೆ ಬಸ್ಸು ತಂಗುದಾಣಗಳ ಕೆಲಸಗಳನ್ನುಪ್ರಾರಂಭಿಸುವಂತೆ ದಿನ ನಿಗದಿ ಮಾಡಿ ಹೆದ್ದಾರಿ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು.
ಕೊನೆಗೂ ಜನರ ಬಹುಕಾಲದ ಬೇಡಿಕೆಗೆ 3 ವರ್ಷದ ನಂತರ ಮನ್ನಣೆ ಸಿಗುವ ಕಾಲ ಸನ್ನಿಹಿತವಾಗಿದೆ
ಸಾಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಎದುರು ಬದುರು ಎರಡು ಬಸ್ಸು ತಂಗುದಾಣಗಳು ಮತ್ತು ಮುರತ್ತಂಗಡಿ ಪರಿಸರದ ಇರುವತ್ತೂರು ರಸ್ತೆ ತಿರುವಿನಲ್ಲಿ ಗಂಗಾ ಸ್ಟೋರ್ಸ್ಎದುರು ಮತ್ತು ರಸ್ತೆಯ ಇನ್ನೊಂದು ಮಗ್ಗುಲಿನಲ್ಲಿ ಗೇರುಬೀಜ ಕಾರ್ಖಾನೆಯ ಎದುರು ಹೊಸ ಬಸ್ಸು ತಂಗುದಾಣ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿದ್ದು, ಈಗಾಗಲೇ ಸಾಣೂರಿನಲ್ಲಿ ಬಸ್ಸು ತಂಗುದಾಣಗಳ ನಿರ್ಮಾಣಕ್ಕೆ ಕೆಲಸ ಕಾರ್ಯ ಪ್ರಾರಂಭಗೊಂಡಿರುವುದು ಸಮಾಧಾನಕರ ವಿಷಯ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.
ಗುಣಮಟ್ಟದ ಹೆದ್ದಾರಿ ಕಾಮಗಾರಿಯ ಜೊತೆಗೆ ಸ್ಥಳೀಯ ಜನರ ಮೂಲಭೂತ ಸೌಕರ್ಯ ಮತ್ತು ರಸ್ತೆ ಸುರಕ್ಷತೆಗೆ ಕೂಡ ಹೆದ್ದಾರಿ ಇಲಾಖೆ ಹೆಚ್ಚಿನ ಗಮನ ಕೊಡಬೇಕೆಂದು_ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಹೆದ್ದಾರಿ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಒತ್ತಾಯಿಸಿರುತ್ತಾರೆ
ವರದಿ ಅರುಣ್ ಭಟ್ ಕಾರ್ಕಳ







