ಕಾರ್ಕಳ :ನವೆಂಬರ್ 30: ಆಳ್ವಾಸ್ ಶಿಕ್ಷಣ ಸಂಸ್ಥೆ ಸಾಂಸ್ಕೃತಿಕ ವೈಭವಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ ಬದಲಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾದಾನವನ್ನು ಮಾಡುವ ಮಾದರಿ ವಿದ್ಯಾಸಂಸ್ಥೆಯಾಗಿ ರಾಜ್ಯದಲ್ಲೇ ಗುರುತಿಸಿಕೊಂಡಿದೆ.
ಆಳ್ವಾಸ್ ವಿರಾಸತ್, ನುಡಿಸಿರಿ ಸಾಂಸ್ಕೃತಿಕ ವೈಭವ ಮೋಹನ್ ಆಳ್ವರ ಒಳ್ಳೆಯ ಹುಚ್ಚುತನ. ಆಳ್ವರಿಗೆ ಸರಿಸಮನವಾದ ವ್ಯಕ್ತಿ ಬೇರೊಂದಿಲ್ಲ. ಎಂದು ಶಶಿಧರ್ ಶೆಟ್ಟಿ ಹೇಳಿದರು.
ಆಳ್ವಾಸ್ ಎಜುಕೇಷನ್ ಫೌಂಡೇಶನ್ ವತಿಯಿಂದ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳದ ಸ್ವರಾಜ್ಯ ಮೈದಾನದ ಪ್ರೊ. ಎಂ. ರಾಮಚಂದ್ರ ವೇದಿಕೆಯಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ್ ಅಳ್ವಾ ಪ್ರಾಸ್ತಾವಿಕ ಮಾತುಗಳನ್ನಾಡಿ ದೇಶ ವಿದೇಶಗಳಲ್ಲಿ ಒಟ್ಟು 88 ಕಡೆಗಳಲ್ಲಿ ನುಡಿಸಿರಿ, ವಿರಾಸತ್ ಘಟಕಗಳನ್ನು ರಚಿಸಲಾಗಿದ್ದು ಫೆಬ್ರವರಿ ಅಂತ್ಯದೊಳಗೆ 50 ಘಟಕಗಳಲ್ಲಿ ವೈಭವಯುತ ಕಾರ್ಯಕ್ರಮಗಳು ನಡೆಯಲಿವೆ. ಈ ಸಾಂಸ್ಕೃತಿಕ ವೈಭವದ ಮೂಲಕ ಯುವಪೀಳಿಗೆಗೆ ಏಕತೆ–ಸಾಮರಸ್ಯದ ಸಂದೇಶವನ್ನು ತಲುಪಿಸುವುದು ನಮ್ಮ ಉದ್ದೇಶ. ಜಾತಿ, ಧರ್ಮ, ಭಾಷೆ ಮೀರಿದ ಭಾರತದ ಸಂಪ್ರದಾಯವನ್ನು ತೋರಿಸುವುದು ನಮ್ಮ ಗುರಿ. ಆಳ್ವಾಸ್ ಸಂಸ್ಥೆಯನ್ನು ಮಿನಿ ಇಂಡಿಯಾವಾಗಿ ರೂಪಿಸುವ ಕನಸು ನಮ್ಮದು. 144 ಕೋಟಿ ಜನಸಂಖ್ಯೆಯ ದೇಶದಲ್ಲಿ 52 ಕೋಟಿ ಯುವಕರಿದ್ದಾರೆ. ವಿದ್ಯಾರ್ಥಿಗಳಲ್ಲಿ ಸುಂದರ ಮನಸು ಕಟ್ಟುವ ಕೆಲಸವಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ಶಾಸಕ ವಿ. ಸುನಿಲ ಕುಮಾರ್ ಮಾತನಾಡಿ ಶಿಕ್ಷಣ ಹಾಗೂ ಸಾಂಸ್ಕೃತಿಕವಾಗಿಯೂ ನಾಡಿನ ಗಮನ ಸೆಳೆದ ಶಿಕ್ಷಣ ಸಂಸ್ಥೆ ಆಳ್ವಾಸ್. ನಮ್ಮ ನಾಡಿನಲ್ಲಿ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ರೂಪವನ್ನು ಕೊಟ್ಟವರು ಆಳ್ವರು. ಇಲ್ಲಿನ ಶಿಕ್ಷಣ ಬರೀ ಅಂಕ ಪಟ್ಟಿಗೆ ಮಾತ್ರ ಸೀಮಿತವಾಗದೆ, ಕ್ರೀಡೆ, ಸಂಸ್ಕೃತಿ, ರಾಷ್ಟ್ರೀಯತೆ, ಸಾಮರಸ್ಯವನ್ನು ಸಾರುವಂತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಆಳ್ವಾಸ್ ಸಂಸ್ಥೆಯ ಮೂಲಕ ನಡೆಯುತ್ತಿದೆ ಎಂದರು.
ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ. ಗಫೂರ್, ಗುಣಪಾಲ ಕಡಂಬ, ದಿನೇಶ್ ಜಿ.ಡಿ., ಮುನಿರಾಜ ರೆಂಜಾಳ, ರಾಜ್ಯ ಕಲ್ಲುಕ್ವಾರಿ ಫೆಡರೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಸುಗ್ಗಿ ಸುಧಾಕರ ಶೆಟ್ಟಿ, ಕ್ರಿಯೇಟಿವ್ ಕಾಲೇಜಿನ ಗಣನಾಥ ಶೆಟ್ಟಿ, ಜ್ಞಾನಸುಧ ಶಿಕ್ಷಣ ಸಂಸ್ಥೆಯ ಡಾ. ಸುಧಾಕರ ಶೆಟ್ಟಿ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೊಟ್ಯಾನ್, ಅಂಬರೀಶ್ ಚಿಪ್ಳುಣ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ವೇಣು ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ಕಾರ್ಕಳ ತಾಲೂಕು ಕಸಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ವಂದಿಸಿದರು.








