ಕುಂದಾಪುರ:ನವೆಂಬರ್ 26: ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ನಾಟಕ ಕಲಾವಿದರಾಗಿ ಪ್ರಸಿದ್ಧ ಪ್ರಸಂಗಕರ್ತರಾಗಿ ಯಕ್ಷಗಾನ ವಲಯದಲ್ಲಿ ‘ಕಂದಾವರ’ ಹೆಸರಿನಿಂದಲೇ ಪ್ರಸಿದ್ಧರಾಗಿದ್ದ ಯಕ್ಷಗಾನದ ಪ್ರಸಂಗಕರ್ತ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ(89) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕಂದಾವರ ರಘುರಾಮ ಶೆಟ್ಟಿಯವರು ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರದಲ್ಲಿ 1936ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ-ಕಂದಾವರ ಪುಟ್ಟಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದರು.
ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಸುಮಾರು 35 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ರಘುರಾಮ ಶೆಟ್ಟಿ, ‘ಮಾದರಿ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದರು.
ವಿದ್ಯಾರ್ಥಿಯಾಗಿದ್ದಾಗಲೇ ಮಕ್ಕಳ ಯಕ್ಷಗಾನದಲ್ಲಿ ವಿವಿಧ ರೂಪದಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಕುಂದಾಪುರದ ಖ್ಯಾತ ನ್ಯಾಯವಾದಿ ಹಾಗೂ ಯಕ್ಷಗಾನ ಮೇಳದ ಯಜಮಾನರಾಗಿದ್ದ ದಿವಂಗತ ಎಂ.ಎಂ.ಹೆಗ್ಡೆಯವರ ಕೂಟದಲ್ಲಿ ಹವ್ಯಾಸಿಯಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದರು.
ಅರ್ಥಧಾರಿಯಾಗಿಯೂ ಖ್ಯಾತನಾಮ ಅರ್ಥಧಾರಿಗಳ ಜತೆ ‘ತಾಳಮದ್ದಲೆ’ಯಲ್ಲಿಯೂ ಖ್ಯಾತಿ ಪಡೆದಿದ್ದರು.
1978 ರಿಂದ ಪ್ರಸಂಗಕರ್ತರಾಗಿ ಕಂದಾವರ ರಘುರಾಮ ಶೆಟ್ಟಿ ‘ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀ ದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿ ಇವರ ಕೆಲವು ಪ್ರಸಂಗಗಳು ಜನಪ್ರಿಯಗೊಂಡಿದ್ದವು ಸದ್ಯ ನೂಜಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.








