ಉಡುಪಿ: ನವೆಂಬರ್ 19:ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದೈಹಿಕ ಶಿಕ್ಷಣ ಶಿಕ್ಷಕ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಲ್ಪೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಅಲೆವೂರು ಗ್ರಾಮ ಪಂಚಾಯತ್ನ ಮಾಜಿ ಸದಸ್ಯ ಗಣೇಶ್ ದೇವಾಡಿಗ ಮಾರ್ಪಳ್ಳಿ (51) ಅವರು ಇಂದು( ನ.19) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಎಂದಿನಂತೆ ಶಾಲೆಗೆ ಕರ್ತವ್ಯಕ್ಕೆ ತೆರಳಿದ ಗಣೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಾರ್ಪಳ್ಳಿ ನಿವಾಸಿಯಾಗಿದ್ದ ಇವರು ಸ್ಥಳೀಯ ಗೆಳೆಯರ ಬಳಗ, ಭಜನ ಮಂಡಳಿ ಹಾಗೂ ಗದ್ದಿಗೆ ಅಮ್ಮನವರ ಸಮಿತಿಯಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.








