ಕಾರ್ಕಳ: ನವೆಂಬರ್ 08:ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥಾಪಕರ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಜಿಇ ಮಣಿಪಾಲ ಇದರ ಆಡಳಿತಾಧಿಕಾರಿ ಡಾ.ಕಾರ್ಕಳ ಶ್ರೀಧರ ರಂಗನಾಥ ಪೈ ಯವರು ಡಾ.ಟಿ.ಎಂ.ಎ.ಪೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ.ಟಿ.ಎಂ.ಎ.ಪೈ ಯವರು ಸ್ಥಾಪಿಸಿದ ಈ ಸಂಸ್ಥೆಯ ಬೆಳವಣಿಗೆಯ ಹಿಂದೆ ಈಗಿನ ಕಾಲಕ್ಕೆ ಅನ್ವಯವಾಗುವ ಆಲೋಚನೆಗಳು ಅವತ್ತೇ ಅವರಲ್ಲಿತ್ತು. ಹಾಗಾಗಿಯೇ ಅವರ ಕನಸಿನ ಸಂಸ್ಥೆಗಳು ಇಂದಿಗೂ ತನ್ನ ಗುರಿಮುಟ್ಟುವಲ್ಲಿ ಹಿಂದೆ ಬಿದ್ದಿಲ್ಲ. ವಿದ್ಯಾರ್ಥಿಗಳು ಡಾ. ಟಿ.ಎಂ.ಎ.ಪೈ ಗಳ ಈ ಚಿಂತನೆಯನ್ನು ಗಂಭೀರವಾಗಿ ಗಮನಿಸಿಕೊಳ್ಳಬೇಕು. ನಿಮ್ಮ ವ್ಯಕ್ತಿತ್ವವನ್ನು ನೀವೇ ಬೆಳೆಸಿಕೊಳ್ಳುವ ತಾಕತ್ತನ್ನು ಸೃಷ್ಟಿ ಮಾಡಿಕೊಳ್ಳಬೇಕು. ಸೂಕ್ಷ್ಮವಾಗಿ ಗ್ರಹಿಸುವ ಮನೋಭಾವವನ್ನು, ಮಾನವತ್ವದ ನೆಲೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಾಗ ಬದುಕಿನಲ್ಲಿ ಹೊಸತನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಭವಿಷ್ಯದ ಭಾರತವು ಯುವಜನತೆಯ ಕೈಯಲ್ಲಿದೆ.
ಕಾರ್ಕಳ ಎನ್ನುವ ಊರು ನನ್ನ ಹೆಸರಿನಲ್ಲಿದೆ. ಅದರ ನೆನಪು ನನ್ನ ಹೃದಯದಲ್ಲಿ ಸದಾ ಇರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಎ.ಶಿವಾನಂದ ಪೈ ಯವರು, ಡಾ.ಟಿ.ಎಂ.ಎ ಪೈ ಯವರು ಬಹಳ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಸ್ಥಾಪಿಸಿದ ಕಾಲೇಜಿದು. ಮಣ್ಣಪಳ್ಳವನ್ನು ಆಧುನಿಕ ಮಣಿಪಾಲವನ್ನಾಗಿ ಮಾಡಬೇಕಾದರೆ ಅದರ ಹಿಂದೆ ಪೈಯವರ ಬಹುದೊಡ್ಡ ಕನಸಿತ್ತು. ಅವರು ತನ್ನ ವಯಕ್ತಿಕ ಹಿತಾಸಕ್ತಿಗಷ್ಟೇ ಆಲೋಚಿಸದೆ, ಸಮಾಜದ ಬದಲಾವಣೆಗಾಗಿ ಚಿಂತಿಸಿ ಅದರಂತೆಯೇ ಬದುಕಿದವರು. ಅವರ ಆಶೋತ್ತರಗಳೆಲ್ಲವನ್ನೂ ಸಂಸ್ಥೆ ಈಡೇರಿಸುವಲ್ಲಿ ಸದಾ ಕಾಳಜಿ ವಹಿಸುತ್ತದೆ. ಬದಲಾವಣೆಯೆನ್ನುವುದು ನಮ್ಮಿಂದಲೇ ಮೊದಲು ಆಗಬೇಕಿದೆ. ಆ ಬಳಿಕ ಸಮಾಜವನ್ನು ಬದಲಾವಣೆ ಮಾಡುವ ಪ್ರಯತ್ನವನ್ನು ಮಾಡಬೇಕು. ನಮ್ಮ ಸ್ಥಾಪಕರೆಲ್ಲ ಸಮಾಜದ ಹಿತಚಿಂತನೆಯನ್ನು ಇಟ್ಟುಕೊಂಡ ಪರಿಣಾಮವೇ ನಾವೆಲ್ಲ ಇಲ್ಲಿ ಒಟ್ಟು ಸೇರಿದ್ದೇವೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಡಾ.ಟಿ.ಎಂ.ಎ.ಪೈ ಅವರಂತೆ ಸಮಾಜಕ್ಕೆ ಮಾದರಿಯಾಗಿ ಎನ್ನುತ್ತಾ, ನಿವೃತ್ತಗೊಂಡ ಎಲ್ಲ ಪ್ರಾಧ್ಯಾಪಕರು, ಸಿಬಂದಿ ವರ್ಗ, ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸೇವೆಯಿಂದ ನಿವೃತ್ತಗೊಂಡ ಹಿಂದಿ ವಿಭಾಗ ಮುಖ್ಯಸ್ಥರಾದ ಪ್ರೊ.ನಾಗಭೂಷಣ್ ಹೆಚ್.ಜಿ., ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ.ಶಿವಕುಮಾರ್ ಎಸ್.ಜೆ., ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸೋಫಿಯಾ ಜಾಯ್ಸ್ ಪಿರೇರಾ ಮತ್ತು ಕಾಲೇಜಿನ ಪರಿಚಾರಕ ಶ್ರೀ ಸುರೇಂದ್ರ ಶೆಟ್ಟಿಗಾರ್, ಭದ್ರತಾ ಸಿಬಂದಿ ಶ್ರೀ ಸತೀಶ್ ಪೂಜಾರಿ ಇವರನ್ನು ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರು ಕಾಲೇಜಿನ ದಿನಗಳ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಬಾರಿ ಪಿಯುಸಿಯಲ್ಲಿ gÁåAPï (Rank) ಪಡೆದ ವಾಣಿಜ್ಯ ವಿಭಾಗದ ಅನ್ನಪೂರ್ಣ ಕಾಮತ್, ಸೃಷ್ಟಿ ಬಿ.ಜಿ., ಪಡೆದ ವಿಜ್ಞಾನ ವಿಭಾಗದ ಕೀರ್ತನ ಅಲ್ಲದೆ, ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಪೆರೇಡಲ್ಲಿ ಭಾಗವಹಿಸಿದ ನೌಕಾದಳದ ಕೆಡೆಟ್ ಪನ್ನಗ, ಭೂದಳದ ಕೆಡೆಟ್ ದೀಕ್ಷಿತಾ ಹಾಗೂ ಈ ಬಾರಿಯ ಡಾ.ಟಿ.ಎಂ. ಪೈ ಬಂಗಾರದ ಪದಕವನ್ನು ಪಡೆದುಕೊಂಡ ಪದವಿ ಕಾಲೇಜನ ಧನುಶ್ರೀ ಪೈ , ಉದಯವಾಣಿ ವಿಂಶತಿ ಪ್ರಶಸ್ತಿ ಪಡೆದ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಾದ ಆಶಯ್ ಜೈನ್, ಸೋನು ಚೌಧರಿ, ವಿವೇಕ್ ಪಿ.ನಾಯಕ್, ಅತ್ಯುತ್ತಮ ಎನ್.ಸಿ.ಸಿ.ಕೆಡೆಟ್ ಅದಿತಿ ಎಸ್.ರಾವ್, ಪದವಿ ಪೂರ್ವ ವಿಭಾಗದ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಓಂಕಾರ್ ಶೆಟ್ಟಿ, ಅತ್ಯುತ್ತಮ ವಿದ್ಯಾರ್ಥಿನಿ ಪ್ರಾರ್ಥನಾ ಪೈ, ಪದವಿ ವಿಭಾಗದ ಅತ್ಯುತ್ತಮ ವಿದ್ಯಾರ್ಥಿ ರಿತ್ವಿಕ್, ಅತ್ಯುತ್ತಮ ವಿದ್ಯಾರ್ಥಿನಿ ಸನ್ನಿಧಿ ಸಿ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ಸ್ವಾಗತಿಸಿದರು. ಸಹ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ನಂದಕಿಶೋರ್ ಕೆ.ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ ರಮೇಶ್ ಎಸ್ .ಸಿ.ವಂದನಾರ್ಪಣೆಗೈದರು.








