ಉಡುಪಿ: ನವೆಂಬರ್ 06:ಕನ್ನಡ ಸಿನಿಮಾಗಳ ಹಿರಿಯ ನಟ ಹರೀಶ್ ರಾಯ್ ವಿಧಿವಶರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹರೀಶ್ ರಾಯ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕೆಜಿಎಫ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿದ್ದರು. ಕೆಜಿಎಫ್ ಹೀರೋ ಯಶ್ ಸೇರಿದಂತೆ ಅನೇಕ ಸಿನಿಮಾ ಹೀರೋಗಳು ಹರೀಶ್ ರಾಯ್ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದರು. ಆದರೇ, ಕ್ಯಾನ್ಸರ್ ಮಹಾಮಾರಿಯಿಂದ ಹರೀಶ್ ರಾಯ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹರೀಶ್ ರಾಯ್ ವಿಧಿವಶರಾಗಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು. ಅಲ್ಲಿ ಅವರ ಮನೆ ಇದೆ. ಹರೀಶ್ ರಾಯ್ ಅವರ ಮೂಲ ಹೆಸರು ಹರೀಶ್ ಆಚಾರ್ಯ. ಅಂಬಲಪಾಡಿಯಲ್ಲಿ ಇರುವ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ. ಅಂಬಲಪಾಡಿಯಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಸದ್ಯ ಹರೀಶ್ ರಾಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಂಜನಾಪುರದಲ್ಲಿರುವ ಮನೆಯ ಬಳಿ ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಶುಕ್ರವಾರ (ನವೆಂಬರ್ 7) ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ.








