ಕಾರ್ಕಳ:ಅಕ್ಟೋಬರ್ 27:ಭುವನೇಂದ್ರ ಕಾಲೇಜಿನ ಐಕ್ಯುಎಸಿ ಮತ್ತು ಗಣಕ ವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಐಟಿಕ್ಲಬ್ ನ ಉದ್ಘಾಟನಾ ಸಮಾರಂಭವು ನೆರವೇರಿತು. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರತೀಕ್ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾನಾಡುತ್ತಾ ವಿದ್ಯಾರ್ಥಿಗಳು ಯಾವಾಗಲೂ ಶಿಕ್ಷಕರ ಪ್ರತಿಬಿಂಬವಾಗಿರುತ್ತಾರೆ. ತಂತ್ರಜ್ಞಾನದ ಕ್ಷೇತ್ರದಲ್ಲಿ ಅನುಭವವೇ ಮುಖ್ಯ. ಕಲಿಕೆಯೆನ್ನುವುದು ಇಲ್ಲಿ ಹೊಸದಾಗಿ ಇರುತ್ತದೆಯೇ ಹೊರತು ಮುಗಿಯುವುದು ಅಂತೇನಿಲ್ಲ. ಹಾಗಾಗಿ ಶಿಕ್ಷಕರು ಈಗಿನ ವಿದ್ಯಾರ್ಥಿಗಳ ಮಟ್ಟಕ್ಕೆ ತಲುಪುವತ್ತ ಬೆಳೆಯಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿ ಬಹಳ ಅಗತ್ಯವಾಗಿದೆ ಎಂದರು. ಅವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹಾಗೂ ಅದರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡುತ್ತಾ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಅವರವರ ಕಲಿಕೆಯ ವಿಭಾಗಗಳಿಗೆ ಅನುಗುಣವಾಗಿ ಅನೇಕ ಹೆಚ್ಚುವರಿ ಕೋರ್ಸುಗಳನ್ನು ತರಲಾಗಿದೆ. ಗಣಕ ವಿಭಾಗದ ತಂತ್ರಜ್ಞಾನದ ಕ್ರಿಯಾಶೀಲತೆಗಾಗಿ ಸಂಸ್ಥೆ ಮತ್ತಷ್ಟು ಸುಧಾರಿತ ಕಲಿಕಾ ಕ್ರಮಗಳನ್ನು ನೀಡಿದೆ. ಆನಿಮೇಶನ್, ಆರ್ಟಿಫಿಷಲ್ ಇಂಟೆಲಿಜೆನ್ಸ್ ಈ ಕಾಲಕ್ಕೆ ಪ್ರಸ್ತುತವಾಗುವ ತಂತ್ರಜ್ಞಾನದ ವಿಧಗಳಾಗಿವೆ. ಹಾಗಾಗಿ ಅದನ್ನು ಕಲಿತುಕೊಳ್ಳುವ ಅನಿವಾರ್ಯತೆ ವಿದ್ಯಾರ್ಥಿ ಹಾಗೂ ಶಿಕ್ಷಕರಿಬ್ಬರಿಗೂ ಇದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಯಾವತ್ತಿಗೂ ಆದರ್ಶವಾಗಬೇಕು ಅನ್ನುವುದು ಎಲ್ಲ ಕಾಲಕ್ಕೂ ಅನ್ವಯವಾಗುವ ಸಂಗತಿಯಾಗಿದೆ. ಶಿಕ್ಷಕರೂ ವಿದ್ಯಾರ್ಥಿಗಳ ಆಲೋಚನೆಗಳಿಗೆ ತಕ್ಕಂತೆ ಕಾಲಕಾಲಕ್ಕೆ ಅಪ್ಡೇಟ್ ಆಗಬೇಕಾದ ಅನಿವಾರ್ಯತೆ ಇದೆ. ಇವತ್ತಿನ ವಿದ್ಯಮಾನಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮನ್ನು ಹೆಚ್ಚು ತೊಡಗಿಸಿಕೊಂಡಾಗ ಕಲಿಕೆಯು ಕುಂಟುತ್ತಾ ಸಾಗದೆ ಪ್ರಗತಿಯ ಕಡೆ ನಡೆಯಲು ಧೈರ್ಯವನ್ನು ಕಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ.ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್, ಐಟಿ ಕ್ಲಬ್ ನ ಕಾರ್ಯದರ್ಶಿಗಳಾದ ವೆಂಕಟರಮಣ ಶೆಣೈ, ಮನಸ್ವಿನಿ, ಪವಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರೂ, ಐಟಿ ಕ್ಲಬ್ ನ ಸಂಯೋಜಕರೂ ಆಗಿರುವ ಸ್ವಾತಿ ಕೆ.ಸ್ವಾಗತಿಸಿದರು. ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಜಾಯ್ಸಿಲ್ ಡಿಸೋಜಾ ಧನ್ಯವಾದಗೈದರು.








