ಕಾರ್ಕಳ: ಅಕ್ಟೋಬರ್ 14:ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಶ್ರೀ ಭುವನೇಂದ್ರ ಕಾಲೇಜು ಇದರ ಜಂಟಿ ಆಶ್ರಯದಲ್ಲಿ 2025-26ರ ಸಾಲಿನ ಉಡುಪಿ ವಲಯ ಮಟ್ಟದ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಕ್ರೀಡಾಕೂಟವು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯಿತು.
ಇದರ ಉದ್ಘಾಟನೆಯನ್ನು ಜಾನ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಕಾಡೆಮಿಯ ಮಾಲಕರಾದ ಜಾನ್ ಡಿಸಿಲ್ವ ಇವರು ನೆರವೇರಿಸಿದರು. ಶಿಸ್ತುಬದ್ಧ ಜೀವನಕ್ಕೆ ಕ್ರೀಡೆ ಬುನಾದಿಯಾಗಿದೆ. ಭವಿಷ್ಯದಲ್ಲಿ ಇದು ನಿಮಗೆ ಅನುಕೂಲವನ್ನು ತಂದು ಕೊಡಬಲ್ಲದು. ಸೋಲು ಗೆಲುವು ಅನ್ನುವುದನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳದೆ ಶೃದ್ಧೆಯಿಂದ ನಿಮ್ಮ ಸಾಧನೆಯಲ್ಲಿ ಪಾಲ್ಗೊಳ್ಳಬೇಕು. ಕೆಲವೊಮ್ಮೆ ಅದೃಷ್ಟ ಇದ್ದರೂ ಶೃದ್ಧೆಯೆನ್ನುವುದು ಅಗತ್ಯವಾಗಿ ಇರಲೇಬೇಕು. ಎಲ್ಲ ಅವಕಾಶಗಳು ನಿಮಗೆ ಲಭಿಸಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ನಿರ್ದೇಶಕರಾದ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ ಮುಖ್ಯ ಅತಿಥಿಯಾಗಿ ಮಾತನಾಡಿ ಮೊಬೈಲ್ ಇಲ್ಲದ ಕಾಲದಲ್ಲಿ ನಮಗೆ ಕ್ರೀಡೆಯೇ ಮನರಂಜನೆಯಾಗಿತ್ತು. ವಿದ್ಯಾರ್ಥಿಗಳಿಗೆ ಇದೊಂದು ಅನುಭವವಾಗಬೇಕು. ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳೆಲ್ಲ ಒಟ್ಟು ಸೇರುವ ಕ್ಷಣಗಳು ಕೂಡಾ ಅವರವರ ಕಾಲೇಜುಗಳನ್ನು ಪ್ರತಿನಿಧಿಸುವವರಾದರೂ ನಿಮ್ಮ ಪ್ರತಿಭೆಯನ್ನಿಲ್ಲಿ ಪ್ರದರ್ಶನ ಮಾಡುವುದು ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡುತ್ತಾ ಯಶಸ್ಸಿಗೆ ಯಾವತ್ತೂ ಅಡ್ಡದಾರಿಗಳಿರಬಾರದು. ಸೋಲುವುದು ಕೂಡಾ ಅನುಭವವೇ. ಸೋತಾಗಲೇ ಜೀವನದಲ್ಲಿ ಪಾಠ ಕಲಿಯಲು ಸಾಧ್ಯ. ಕ್ರೀಡೆ ಪಠ್ಯಕ್ಕೆ ಪೂರಕವಾಗಿ ಇರುವಂಥದ್ದು. ಇದರಲ್ಲಿ ಯಶಸ್ಸು ಪಡೆಯುವುದು ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಫಲವಾಗಿರುತ್ತದೆ. ಇಪ್ಪತ್ತೇಳು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಹೆಮ್ಮೆಗೆ ಸಾಕ್ಷಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಎರ್ಮಾಳ್ ಮೋಹನ ಶೆಣೈ ಉಪಸ್ಥಿತರಿದ್ದರು.
ಡಾ.ಜಿ.ಶಂಕರ್,ಸರಕಾರೀ ಮಹಿಳಾ ಕಾಲೇಜು,ಅಜ್ಜರಕಾಡು ಇದರ ದೈಹಿಕ ನಿರ್ದೇಶಕರಾದ ಡಾ.ರಾಮಚಂದ್ರ ಪಾಟ್ಕರ್ ಪಂದ್ಯಾಟದ ಪ್ರಮುಖ ತೀರ್ಪುಗಾರರಾಗಿ ಭಾಗವಹಿಸಿದ್ದರು. ಭುವನೇಂದ್ರ ಕಾಲೇಜಿನ ದೈಹಿಕ ನಿರ್ದೇಶಕರಾದ ಶ್ರೀ ನವೀನ್ ಚಂದ್ರ ಸ್ವಾಗತಿಸಿದರು. ತೃತೀಯ ಬಿ.ಕಾಂ ನ ಅನನ್ಯ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶಂಕರ್ ಕುಡ್ವ ವಂದನಾರ್ಪಣೆಗೈದರು.
ಒಟ್ಟು ಇಪ್ಪತ್ತೇಳು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.








