ಉಡುಪಿ :ಅಕ್ಟೋಬರ್ 13:ಹಾಸ್ಯ ನಟ,ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಧಾರವಾಡ ರಂಗಾಯಣ ನಿರ್ದೇಶಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಹಾಸ್ಯ ನಟನಾಗಿ, ರಂಗಕರ್ಮಿಯಾಗಿ ಅವರು ಗುರುತಿಸಿಕೊಂಡಿದ್ದರು. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ಮೃತರಾಗಿದ್ದಾರೆ.
ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಈಗ ಒತ್ತಡ ಜಾಸ್ತಿ ಆಗಿದ್ದರಿಂದ ಮತ್ತೆ ಹಾರ್ಟ್ ಅಟ್ಯಾಕ್ ಆಗಿರಬಹುದು. ವಿಜಯಪುರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ರಾಜು ತಾಳಿಕೋಟೆ ಅವರು ಸಕ್ರಿಯರಾಗಿದ್ದರು. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೇ’, ‘ರಾಜಧಾನಿ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.








