ಕಾರ್ಕಳ: 13 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕಾರ್ಕಳ ತಾಲೂಕಿನ ಮುಂಡ್ಯೂರಿನ ಬಾಲಕ ಅ. 7ರಂದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮುಂಡೂರು ನಿವಾಸಿ ಪ್ರಭಾಕರ ಪ್ರಭು ಅವರ ಪುತ್ರ ಅನಂತಕೃಷ್ಣ ಪ್ರಭು ಮುಂಡ್ಯೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವಾಗ ಮನೆಯಿಂದ ದೇವಸ್ಥಾನ ಹೋಗುತ್ತಿರುವುದಾಗಿ ಹೇಳಿ ಮನೆ ಬಿಟ್ಟು ಓಡಿ ಹೋಗಿರುತ್ತಾನೆ. ಈ ಕುರಿತು 10/12/2012ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪತ್ತೆ ಕಾರ್ಯ ನಡೆದಿತ್ತಾದರೂ ಆತನ ಸುಳಿವು ದೊರಕಿರುವುದಿಲ್ಲ.
ಇತ್ತೀಚೆಗೆ ಉಡುಪಿ ಎಸ್ಪಿ ಡಾ. ಹರಿರಾಂ ಶಂಕರ್ ಅವರು ಕಾಣೆಯಾದ ಮಕ್ಕಳ ಪ್ರಕರಣ ಪತ್ತೆಗಾಗಿ ಡಿವೈಎಸ್ಪಿ ಪ್ರಭು ಡಿ.ಟಿ. ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿದ್ದರು. ಈ ತಂಡ ನಾಪತ್ತೆಯಾದವರ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಮಂಗಳವಾರ ರಾತ್ರಿ ಬೆಂಗಳೂರು ದೇವನಹಳ್ಳಿ ಬಳಿ ಅನಂತಕೃಷ್ಣ ಪ್ರಭು ಇಂಟಿರಿಯರ್ ಡಿಸೈನರ್ ಆಗಿರುವ ಮಾಹಿತಿ ದೊರೆತು ಆ ನಿಟ್ಟಿನಲ್ಲಿ ಅಂತಹ ಕಂಪೆನಿಗಳ ತಲಾಶೆ ನಡೆಯಿತು. ಈ ವೇಳೆ ಅನಂತಕೃಷ್ಣ ಪ್ರಭು ಪತ್ತೆಯಾಗಿದ್ದಾರೆ. ಬಳಿಕ ಆತನನ್ನು ಪೊಲೀಸರು ಉಡುಪಿ ಎಸ್ಪಿ ಕಚೇರಿಗೆ ಕರೆತಂದರು. ತಂದೆ ಪ್ರಭಾಕರ ಪ್ರಭು ಅವರನ್ನು ಕರೆಸಿದರು. 16 ವರ್ಷದಲ್ಲಿ ಕಾಣೆಯಾಗಿದ್ದ ಮಗನಿಗೆ ಇದೀಗ 29 ವರ್ಷ.
.
ತನಿಖಾ ತಂಡದಲ್ಲಿ ಬ್ರಹ್ಮಾವರ ಎಸ್ಐ ಸುದರ್ಶನ್ ದೊಡಮನಿ, ಉಡುಪಿ ನಗರ ಠಾಣೆ ಎಸ್ಐ ಈರಣ್ಣ ಶಿರಗುಂಪಿ, ಹೆಡ್ಕಾನ್ಸ್ಟೇಬಲ್ ಇಮ್ರಾನ್, ಚೇತನ್, ಪಿಸಿಗಳಾದ ಸಂತೋಷ್ ತ್ರಾಸಿ, ಮಲ್ಲಯ್ಯ ಹಿರೇಮಠ ಇದ್ದರು.








