ಉಚ್ಚಿಲ: ಸೆಪ್ಟೆಂಬರ್. 30 : ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸೆಪ್ಟೆಂಬರ್ 30ರಂದು ನಡೆದಿದೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಪುತ್ತೂರು ನೋಂದಣಿಯ ಬೈಕ್‌ನಲ್ಲಿ ಮೃತರಾದವರು ಉಡುಪಿಯಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಮಾಜ ಸೇವಕ ಜಮಾಲುದ್ದೀನ್ ಉಚ್ಚಿಲ, ಹಮೀದ್ ಮೂಳೂರು, ರಯೀಸ್, ರಝಾಕ್, ಅನ್ವರ್ ಕೋಟೇಶ್ವರ ಮತ್ತು ಸಾದಿಕ್ ಪಡುಬಿದ್ರಿ ಅವರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸುವಲ್ಲಿ ನೆರವು ನೀಡಿದರು.








