ಉಡುಪಿ, ಸೆ. 27: ದಕ್ಷಿಣ ಭಾರತದಲ್ಲಿ ಅತೀ ಎತ್ತರವಾದ ಮೇರು ಶ್ರೀಚಕ್ರವನ್ನು ಹೊಂದಿರುವ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ, ವೇಮೂ ವಿಖ್ಯಾತ್ ಭಟ್ ಅವರ ನೇತೃತ್ವದಲ್ಲಿ ಶನಿವಾರ ಲಲಿತಾ ಪಂಚಮಿಯಂದು ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ರಾಜರಾಜೇಶ್ವರಿಗೆ ಸಮರ್ಪಿತವಾಗುವ ಬಹು ವಿಶಿಷ್ಟವೆನಿಸಿದ ಶ್ರೀ ಲಲಿತಾ ಸಹಸ್ರ ಕದಳಿಯಾಗ ಜೋಡಿಯಾಗಿ ಸಮರ್ಪಣೆಗೊಂಡಿತು.
ಭಕ್ತರಾದ ಬೆಂಗಳೂರಿನ ಉದ್ಯಮಿ ಕೃಷ್ಣ ಶೆಟ್ಟಿ ಮತ್ತು ಮನೆಯವರು ಹಾಗೂ ಬೆಂಗಳೂರಿನ ಸುಧೀರ್ ಆಶಾ ದಂಪತಿಯಿಂದ ಸೇವಾ ರೂಪದಲ್ಲಿ ಯಾಗ ನಡೆಯಿತು. ಉದ್ಯಾವರದ ರತ್ನಾ ದಿನೇಶ್ ದಂಪತಿಯಿಂದ ದುರ್ಗಾ ನಮಸ್ಕಾರ ಸಮರ್ಪಿಸಲ್ಪಟ್ಟಿತು. ಸಹಸ್ರ ನಾಮಾರ್ಚನೆ, ಕಲ್ಪೋಕ್ತ ಪೂಜೆ, ಶ್ರೀರಂಗಪೂಜೆ, ದೀಪಾರಾಧನೆ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು. ಅಲಂಕಾರ ತಜ್ಞ ಆನಂದ ಬಾಯರಿ ಕಬ್ಬಿನ ಜಲ್ಲೆಗಳ ಮಧ್ಯೆ ಕೈಯಲ್ಲಿ ಗಿಳಿಯನ್ನು ಹಿಡಿದು ಗಿಳಿ ಹಸುರು ಸೀರೆಯುಟ್ಟು ಎದ್ದು ಬರುವಂತೆ ದೇವಿಯನ್ನು ಲಲಿತಾಂಬಿಕೆಯಾಗಿ ಅಲಂಕರಿಸಿದ್ದರು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು.
ಬೆಳಗ್ಗಿಿನಿಂದ ರಾತ್ರಿಿಯವರೆಗೆ ಉಡುಪಿಯ ಶ್ರೀ ಆದಿಶಕ್ತಿಿ ಭಜನ ಮಂಡಳಿ, ಶ್ರೀ ನಾಗೇಶ್ವರ ಭಜನ ಮಂಡಳಿ, ಶ್ರೀ ಉಮಾಮಹೇಶ್ವರ ಭಜನ ಮಂಡಳಿ ಚಕ್ರತೀರ್ಥ, ನಾಗಬನ ಭಜನ ಮಂಡಳಿಯಿಂದ ಭಜನೆ ಸಂಕೀರ್ತನೆ ನಡೆಯಿತು. ವಿ ಸಂಜನಾ ಸನಿಲ್, ಸೃಷ್ಟಿ, ಭಕ್ತಿ ನಾಯಕ್, ಆಶ್ರಿಯಾ, ಅದ್ವಿಕಾ, ದಾರಿಕಾ, ಜ್ಞಾನ, ಶರಣ್ಯಾ, ಶನಯಾ, ಸೃಷ್ಟಿಿ, ವಿ ಶ್ರೇಯಾ ಶಾನುಭಾಗ್ ಅವರಿಂದ ದೇವಿಗೆ ಅಭಿಮುಖವಾಗಿ ನೃತ್ಯಸೇವೆ ಸಮರ್ಪಣೆಗೊಂಡಿತು. ನವಶಕ್ತಿ ವೇದಿಕೆಯಲ್ಲಿ ಕ್ರೇಜಿ ಕಿಡ್‌ಸ್ ಪರ್ಕಳ ಅವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.








