ಕಮಲಶಿಲೆ ಸೆಪ್ಟೆಂಬರ್ 14: ಚಲಿಸುತ್ತಿದ್ದ ಬೈಕ್ ಮೇಲೆ ಕಡವೆಯೊಂದು ಹಾರಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಮೃತಪಟ್ಟಿದ್ದು, ಸಹಸವಾರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪದ ತಾರೆಕೊಡ್ಲು ಎಂಬಲ್ಲಿ ಸಂಭವಿಸಿದೆ.
ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆಯ ನಿವಾಸಿ ಶ್ರೇಯಸ್ (22) ಮೃತಪಟ್ಟ ಯುವಕ.ಪಡುವಾಲೂರರು ನಿವಾಸಿ ವಿಘ್ನೇಶ (19) ಗಂಭೀರವಾಗಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ನೇಹಿತರಾಗಿದ್ದ ಅವರಿಬ್ಬರೂ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿರುವಾಗ ತಾರೆಕೊಡ್ಲು ಬಳಿ ಏಕಾಏಕಿ ದೊಡ್ಡ ಕಡೆವೆಯು ಬೈಕಿಗೆ ಅಡ್ಡ ಬಂದಿದ್ದು, ಬೈಕ್ ಅದಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ಕಡವೆಯ ಕೋಡುಗಳು ದೇಹಕ್ಕೆ ನುಗ್ಗಿದ್ದರಿಂದ ಉಂಟಾದ ಗಾಯದಿಂದ ತೀವ್ರ ರಕ್ತಸ್ರಾವವಾಗಿ ಶ್ರೇಯಸ್ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ನಜ್ಜು ನುಜ್ಜಾಗಿದೆ. ಕಡವೆ ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ಶ್ರೇಯಸ್ ಬೆಂಗಳೂರಿನಲ್ಲಿ ಉದ್ಯೋಗಿದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








