ಮಣಿಪಾಲ್, ಸೆ.10: ಇನ್‌ಸ್ಟಿಟ್ಯೂಷನ್ ಆಫ್ ಇಮಿನೆನ್ಸ್ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಇದರ ಘಟಕಗಳಾದ ಕಸ್ತೂರಬಾ ಮೆಡಿಕಲ್ ಕಾಲೇಜ್ (ಕೆಎಂಸಿ) ಹಾಗೂ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್ ಮುಖಾಂತರ, ಸೆಪ್ಟೆಂಬರ್ 10, 2025ರಂದು, ಮಣಿಪಾಲ್‌ನ ಡಾ. ಟಿ.ಎಂ.ಎ. ಪೈ ಆಡಿಯೋಟೋರಿಯಂನಲ್ಲಿ ಶಿಶು ಭಾರತ್: ಭಾರತದ ಧೈರ್ಯಶಾಲಿ ಹೃದಯಗಳ ಪೋಷಣೆ:
ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಈ ಪ್ರಮುಖ ಆರೋಗ್ಯ ಕಾರ್ಯಕ್ರಮವು ವೈದ್ಯಕೀಯ ತಜ್ಞರು, ಕ್ಯಾನ್ಸರ್ ಹೋರಾಟಗಾರರು, ಚಿಂತಕರು ಹಾಗೂ ಸಮುದಾಯದ ಪಾಲುದಾರರನ್ನು ಒಂದೇ ವೇದಿಕೆಗೆ ತಂದು, ಭಾರತದಲ್ಲಿ ಮಕ್ಕಳ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸುವುದಕ್ಕೂ ಸಮಗ್ರ ಬೆಂಬಲ ವ್ಯವಸ್ಥೆಯನ್ನು ರೂಪಿಸುವುದಕ್ಕೂ ಸಹಕರಿಸಿತು.
ಈ ಕಾರ್ಯಕ್ರಮವನ್ನು ಕಸ್ತೂರಬಾ ಮೆಡಿಕಲ್ ಕಾಲೇಜ್ ಹಾಗೂ ಡಾ. ಧರ್ಮಾಂಬಾಳ ನಮಸಿವಾಯಂ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದು, ದಿ ಡಯೋಟ್ ಫೌಂಡೇಶನ್ , ಕ್ಯಾಲಿಫೋರ್ನಿಯಾ ಹಾಗೂ ಮಾಹೆಯ ಎಕನಾಮಿಕ್ಸ್ ಅಂಡ್ ಸೋಷಿಯಲ್ ನೆಟ್ವರ್ಕಿಂಗ್ ಸೆಂಟರ್ ಇವರ ಸಹಯೋಗದಲ್ಲಿ ನಡೆಸಲಾಯಿತು. ಈ ಕಾರ್ಯಕ್ರದಲ್ಲಿ ಪ್ರಮುಖ ವೈದ್ಯಕೀಯ ತಜ್ಞರು, ದಾನಿಗಳು, ಆರ್ಥಿಕ ಸಂಸ್ಥೆಗಳು ಮತ್ತು ಸಾಮಾಜಿಕ ಬೆಂಬಲ ಸಂಸ್ಥೆಗಳು ಭಾಗವಹಿಸಿ, ಮಕ್ಕಳ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಪರಿಹರಿಸುವ ಗುರಿಯೊಂದಿಗೆ ಸಹಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಪ್ರೋ-ಚಾನ್ಸೆಲರ್, ಡಾ. ಎಚ್.ಎಸ್. ಬಲ್ಲಾಳ್ ಅವರು ವಹಿಸಲಿದ್ದಾರೆ. ದಿ ಡಿಯೋಟ್ ಫೌಂಡೇಶನ್ ಕ್ಯಾಲಿಫೋರ್ನಿಯಾ ಇದರ ಸಂಸ್ಥಾಪಕ ಶ್ರೀಮತಿ ಅನಾಘಾ ಜೋಶಿ ಮುಖ್ಯ ಅತಿಥಿಯಾಗಿ, ಶ್ರೀ ರವೀಂದ್ರ ರೈ, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ, ಬಿಒಬಿ ಕಾರ್ಡ್, ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಆರೋಗ್ಯ ಸೇವೆ, ದಾನಶೀಲತೆ ಮತ್ತು ಹಣಕಾಸು ವಲಯಗಳ ನಡುವಿನ ಸಹಯೋಗವನ್ನು ಒತ್ತಿ ಹೇಳುತ್ತದೆ.
ಕಾರ್ಯಕ್ರಮವು ಕುಮಾರಿ ಅನುಶ್ರೀ ಅವರ ಪ್ರಾರ್ಥನಾ ಗೀತೆಯಿಂದ ಆರಂಭವಾಗಿ, ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಮಕ್ಕಳಿಂದ ಮನಮುಟ್ಟುವ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಸ್ಫೂರ್ತಿದಾಯಕ ಚಾಲನೆ ದೊರೆಯಿತು.
ಸಮಾರಂಭದ ಉದ್ಘಾಟನೆಯನ್ನು ಗಣ್ಯ ಅತಿಥಿಗಳು ಹಾಗೂ ಪಾಲ್ಗೊಂಡವರಿಂದ ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಲಾಯಿತು.
ಬಳಿಕ ಮಾತನಾಡಿದ ಮಾಹೆಯ ಪ್ರೊ ವೈಸ್
ಚಾನ್ಸಲರ್ ಡಾ. ಎಚ್.ಎಸ್.ಬಳ್ಳಾಲ್ ಅವರು ಇಂದಿನ ಸಭೆ ಕೇವಲ ಜಾಗೃತಿಯಲ್ಲ – ಇದು ಮಕ್ಕಳ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪ್ರತಿಯೊಂದು ಕುಟುಂಬದೊಂದಿಗೆ ನಾವು ಇರುವೆವೆಂಬ ಮಾಹೆಯ ಬದ್ಧತೆಯ ಸಂಕೇತವಾಗಿದೆ. ನಮ್ಮ ಯುವ ಹೋರಾಟಗಾರರ ಧೈರ್ಯ ಹಾಗೂ ವೈದ್ಯಕೀಯ ತಜ್ಞರ, ಕುಟುಂಬಗಳ ಮತ್ತು ಬೆಂಬಲ ಸಂಸ್ಥೆಗಳ ಸಹಕಾರವು ಜಾಗೃತಿಯನ್ನು ನೈಜ ಕ್ರಿಯಾಶೀಲ ಬೆಂಬಲವಾಗಿ ಪರಿವರ್ತಿಸಲು ನಮಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಶ್ರೀಮತಿ ಅನಘಾ ಜೋಶಿ, ಮುಖ್ಯ ಅತಿಥಿ ಹಾಗೂ ಸ್ಥಾಪಕಿ, ದಿ ಡಯೋಟ್ ಫೌಂಡೇಶನ್, ಅವರು ಮಾತನಾಡಿ ಶಿಶು ಭಾರತ್ ಮಾನವೀಯ ಸಹಕಾರವು ಭೌಗೋಳಿಕ ಅಂತರಗಳನ್ನು ಮೀರಿ ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ನಿಜವಾದ ಉದಾಹರಣೆ. ಆರೋಗ್ಯ ಸೇವೆ, ದಾನಶೀಲತೆ ಮತ್ತು ಸಮುದಾಯ ಬೆಂಬಲ ಒಟ್ಟುಗೂಡಿದಾಗ, ನಾವು ಕೇವಲ ಭರವಸೆಯನ್ನು ನೀಡುವುದಲ್ಲ, ಬದಲಾಗಿ ಗುಣಮುಖತೆಗೆ ಸ್ಪಷ್ಟವಾದ ದಾರಿಯನ್ನು ನಿರ್ಮಿಸುತ್ತೇವೆ ಎಂಬ ಧೈರ್ಯವನ್ನು ನೀಡುವುದಾಗಿದೆ ಎಂದು ಹೇಳಿದರು.
ಶ್ರೀ ರವೀಂದ್ರ ರೈ, ಗೌರವ ಅತಿಥಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ ಇ ಓ, ಬಿ ಓ ಬಿ ಕಾರ್ಡ್ ತಮ್ಮ ಭಾಷಣದಲ್ಲಿ ಮಕ್ಕಳ ಆರೋಗ್ಯ ಸೇವೆಗಳನ್ನು ಬಲಪಡಿಸಲು ನಿಗಮಗಳು ಮತ್ತು ಸಮುದಾಯದ ಸಹಕಾರದ ಮಹತ್ವವನ್ನು ಹಂಚಿಕೊಂಡು, ಚಿಕಿತ್ಸಾ ವೆಚ್ಚ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ದೀರ್ಘಕಾಲಿಕ ಪರಿಹಾರ ಮಾರ್ಗಗಳ ಕುರಿತು ವಿವರಗಳನ್ನು ಹಾಗೂ ಅದರ ಅಗತ್ಯಗಳನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ದಿ ಪವರ್ ವಿತಿನ್” ಎಂಬ ಪ್ರೇರಣಾದಾಯಕ ಭಾಷಣವನ್ನು ಧರ್ಮಾಂಬಾಳ ನಮಸಿವಾಯಂ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ, ಶ್ರೀ ಎ. ಡಿ. ಸೆಂದುರೇಸ್ವರನ್ ನೀಡಿದರು. ಇದರಲ್ಲಿ ಕಠಿಣ ರೋಗಗಳ ವಿರುದ್ಧ ಹೋರಾಡಿ ಬದುಕುಳಿದ ಮಕ್ಕಳ ಅದ್ಭುತ ಸಾಹಸವನ್ನು ಹಂಚಿಕೊಂಡರು.
ಇದನ್ನು ಅನುಸರಿಸಿ ಬೋನ್ ಟ್ಯೂಮರ್ ನಲ್ಲಿ ಹೋರಾಡಿ ಗೆದ್ದು ಬಂದ ಕುಮಾರಿ ವೀನಾ ಟಿ. ಎನ್., ತಮ್ಮ ಹೋರಾಟದ ಮನಕಲಕುವ ಅನುಭವವನ್ನು ಹಂಚಿಕೊಂಡಿದ್ದು, ಶ್ರೋತೃಗಳನ್ನು ಭಾವನಾತ್ಮಕವಾಗಿ ಸ್ಪರ್ಶಿಸಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಮುಖ ಸಂಸ್ಥೆಗಳು ಸಮಗ್ರ ಬೆಂಬಲ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಬೆಂಬಲವನ್ನು ನೀಡಿದ್ದು, ಚಿಕಿತ್ಸಾ ವೆಚ್ಚದ ಜೊತೆಗೆ ಕುಟುಂಬಗಳು ಎದುರಿಸುವ ಪರೋಕ್ಷ ಸವಾಲುಗಳಿಗೂ ಪರಿಹಾರವನ್ನು ಒದಗಿಸುವ ಚಟುವಟಿಕೆಗಳ ಚೌಕಟ್ಟನ್ನು ಹಂಚಿಕೊಂಡರು.
ಸ್ವಾಗತ ಭಾಷಣವನ್ನು ಮಾಹೆಯ ಪ್ರೊವೈಸ್ ಚಾನ್ಸಲರ್ ಡಾ. ಶರತ್ ಕೆ. ರಾವ್ ನೀಡಿದ್ದು, ಸಂಸ್ಥೆಯು ಪೀಡಿಯಾಟ್ರಿಕ್ ಆಂಕಾಲಜಿ (ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗ) ಕ್ಷೇತ್ರದಲ್ಲಿ ಮುಂದುವರಿದ ಚಿಕಿತ್ಸಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಹಾಗೂ ಚಿತ್ಸೆಯ ಕುರಿತ ಬದ್ಧತೆಯನ್ನು ಒತ್ತಿಹೇಳಿದರು. ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ, ಇಲಾಖೆಯ ವಿವಿಧ ಚಟುವಟಿಕೆಗಳ ಕುರಿತು ವಿವರವಾದ ಮಾಹಿತಿಗಳನ್ನು ನೀಡಿದರು. ಮತ್ತು ಮಕ್ಕಳಿಗೆ ಸಮಗ್ರ ಚಿಕಿತ್ಸಾ ಹಾಗೂ ಮಾನಸಿಕ ಬೆಂಬಲವನ್ನು ಒದಗಿಸುವ ಸಮಗ್ರ ದೃಷ್ಟಿಕೋನವನ್ನು ಹಂಚಿಕೊಂಡರು.
ಈ ಶಿಶು ಭಾರತ್ ಕಾರ್ಯಕ್ರಮದ ಯಶಸ್ವಿ ಸಮಾರೋಪವು ಮಾಹೆಯನ್ನು ಕೇವಲ ಚಿಕಿತ್ಸೆಯಲ್ಲದೆ, ರೋಗಿಗಳ ಹಾಗೂ ಕುಟುಂಬಗಳ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ನಿವಾರಿಸಲು ಬದ್ಧವಾಗಿರುವ ಸಂಸ್ಥೆಯಾಗಿ ಹೊರಹೊಮ್ಮುವಂತೆ ಮಾಡುತ್ತದೆ. ಇದು ಭಾರತದೆಲ್ಲೆಡೆ ಆರೋಗ್ಯ ವ್ಯವಸ್ಥೆಯಲ್ಲಿ ವ್ಯಾಪಕ ಬೆಂಬಲ ವ್ಯವಸ್ಥೆಯನ್ನು ರೂಪಿಸಲು ಹೊಸ ಅವಕಾಶಗಳನ್ನು ತೆರೆದಿದೆ.
ಕಾರ್ಯಕ್ರಮವು ಗೌರವಾನ್ವಿತ ಅತಿಥಿಗಳಿಗೆ ಸ್ಮರಣಿಕೆ ವಿತರಣೆ ಹಾಗೂ ಶ್ರೀಮತಿ ಹಿಲ್ಡಾ ಕೋರ್ನೆಲಿಯೋ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಭಾವನಾತ್ಮಕ ಹಾಗೂ ಸ್ಫೂರ್ತಿದಾಯಕ ರೀತಿಯಲ್ಲಿ ಸಮಾರೋಪಗೊಂಡಿತು.








