ಮಣಿಪಾಲ, ಆ. 25,: ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಮಾನ್ಯತೆ ಪಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲದಲ್ಲಿ ಸೋಮವಾರ ಮಣಿಪಾಲ ಸ್ಟಾರ್ಟ್-ಅಪ್ ಎಕ್ಸ್ಪೋ 2025 ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಆರಂಭಗೊಂಡಿತು. ಈ ಪ್ರಮುಖ ಕಾರ್ಯಕ್ರಮವು ಭಾರತದ ಹೊಸ ಆವಿಷ್ಕಾರಮಯ ಯೋಜನೆ, ಯೋಚನೆಗಳನ್ನು ಹಾಗೂ ಕ್ರಾಂತಿಕಾರಿ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದರ ಜೊತೆಗೆ ಉದ್ಯಮಶೀಲ ಪರಿಸರದಲ್ಲಿ ಅರ್ಥಪೂರ್ಣ ಸಂಪರ್ಕಗಳನ್ನು ಬೆಳೆಸುವ ಮೂಲಕ ಭರ್ಜರಿ ಯಶಸ್ಸು ಗಳಿಸಿತು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡ ಮಾಹೆ ಯ ಕುಲಪತಿ ಲೆ. ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿ ಎಸ್ ಎಂ(ನಿವೃತ್ತ), ಮಾತನಾಡಿ, ಮಾಹೆ ಆವಿಷ್ಕಾರ ಮತ್ತು ಉದ್ಯಮಶೀಲತೆಯತ್ತ ನೀಡುತ್ತಿರುವ ಬದ್ಧತೆಯನ್ನು ವಿವರಿಸಿದರು. ಈ ವರ್ಷ ಮಾಹೆ ಸಂಶೋಧನೆ ಮತ್ತು ಅಭಿವೃದ್ಧಿಗೆ ₹365 ಕೋಟಿ ಹೂಡಿಕೆ ಮಾಡಲಿದೆ ಎಂದು ಅವರು ಹಂಚಿಕೊಂಡರು.
ಮಾಹೆಯಲ್ಲಿ ಆಲೋಚನೆ ಹುಟ್ಟುವಿಕೆಯಿಂದ ಹಿಡಿದು ಆವಿಷ್ಕಾರ, ಉದ್ಯಮಶೀಲತೆ, ಸ್ಟಾರ್ಟ್-ಅಪ್ ಪರಿಸರದ ಬೆಳವಣಿಗೆ ಮೊದಲಾದ ಉದ್ಯಮದ ಪ್ರಗತಿಯ ಹಂತದ ಸಂಪೂರ್ಣ ಪ್ರಯಾಣ ಒಂದೇ ಸೂರಿನಡಿಯಲ್ಲಿ ಸಾಧ್ಯ. ನಾವು ಸಮಗ್ರ ಪ್ರಮಾಣೀಕರಣ ಪ್ರಯೋಗಗಳನ್ನು, ಅಳವಡಿಸಬಹುದಾದ ಸಾಧನಗಳ ಕ್ಲಿನಿಕಲ್ ಟ್ರಯಲ್‌ಗಳನ್ನು ಸಹ ಒದಗಿಸುತ್ತೇವೆ. ಇದು ನಮ್ಮ ಸಂಶೋಧನೆ ಮತ್ತು ಪರಿವರ್ತನಾ ಫಲಿತಾಂಶಗಳಲ್ಲಿ ನೀಡಿರುವ ಆಳವಾದ ಹೂಡಿಕೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.

ಐಐಟಿ ದೆಹಲಿ, ಐಐಟಿ ಮದ್ರಾಸ್, ಫಿಲಿಪ್ಸ್, ಎಂಐಟಿ, ಕೆಎಂಸಿ ಹಾಗೂ ಮಣಿಪಾಲ ಆಸ್ಪತ್ರೆಗಳೊಂದಿಗೆ ಮಾಹೆಯ ಸಹ ಪಾಲುದಾರತ್ವದ ಕುರಿತು ಮಾತನಾಡಿ ಹೃದಯರೋಗ ತಡೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಮಹತ್ವಾಕಾಂಕ್ಷಿ ಯೋಜನೆಯ ಪ್ರಮುಖ ಪಾಲುದಾರನಾಗಿದೆ ಎಂದು ಹೇಳಿದರು.
ಸ್ವಾಭಾವಿಕ ಬೆಳವಣಿಗೆಯ ಯುಗ ಮುಗಿದಿದೆ. ಇಂದು ನಾವು ವೇಗದ ಪ್ರಗತಿಯ ಅಂಚಿನಲ್ಲಿ ನಿಂತಿದ್ದೇವೆ. ಈ ಪರಿವರ್ತನೆಯನ್ನು ಮುಂದಕ್ಕೆ ಸಾಗಿಸಲು ಎಲ್ಲರೂ ಕೈಜೋಡಿಸುವುದು ಅಗತ್ಯ,” ಎಂದು ಅವರು ಸೇರಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿ ಐ ಆರ್ ಎ ಸಿ ಇಂಕ್ಯುಬೇಶನ್ ಅಧಿಕಾರಿ ಶ್ರೀಮತಿ ಅಪೂರ್ವಾ ಶ್ರೀವಾಸ್ತವ ಮಾತನಾಡಿ
“ಮಣಿಪಾಲ ಸ್ಟಾರ್ಟ್-ಅಪ್ ಎಕ್ಸ್ಪೋ, ಭಾರತದೆಲ್ಲೆಡೆ ಬಿ ಐ ಆರ್ ಎ ಸಿ ಬೆಳೆಸಲು ಪ್ರಯತ್ನಿಸುವ ಸಹಯೋಗಿ ಪರಿಸರದ ಪ್ರತಿಬಿಂಬ. ಇಂದು ನಾವು ಕಂಡ ಆವಿಷ್ಕಾರಾತ್ಮಕ ಸ್ಟಾರ್ಟ್‌ಅಪ್ಗಳು, ಶೈಕ್ಷಣಿಕ ಮೇಲುಸ್ತುವಾರಿ ಹಾಗೂ ಕೈಗಾರಿಕಾ ಪಾಲುದಾರಿಕೆಗಳ ಸಮಾಗಮವೇ ನಮ್ಮ ದೇಶದ ಬಯೋಟೆಕ್ ಉದ್ಯಮಶೀಲತೆಯ ಭವಿಷ್ಯ. ಸಂಶೋಧನೆಯಿಂದ ವ್ಯಾಪಾರೀಕರಣದವರೆಗೆ ಮಾಹೆ ಅನುಸರಿಸಿರುವ ಸಮಗ್ರ ಕ್ರಮವು ಭಾರತವನ್ನು ಜಾಗತಿಕ ಬಯೋಟೆಕ್ ಹಬ್ ಆಗಿ ರೂಪಿಸಲು ನಮ್ಮ ರಾಷ್ಟ್ರೀಯ ಗುರಿಗೆ ಸಂಪೂರ್ಣ ಹೊಂದಿಕೊಳ್ಳುತ್ತದೆ ಎಂದು ಹೇಳಿದರು.
ಎಕ್ಸ್ಪೋದಲ್ಲಿ ಆಕರ್ಷಕ ವಿವಿಧ ಕ್ಷೇತ್ರಗಳ ಪರಿಣಿತ ತಜ್ಞರಿಂದ ಉಪನ್ಯಾಸಗಳ ಸರಣಿ ನಡೆಯಿತು.
ಡಾ. ಕೆ. ಮೋಹನ್ ವೇಲು, ಸೈಂಟಿಸ್ಟ್ , ಡಿಬೆಲ್/ಡಿ ಆರ್ ಡಿ ಓ, “ರಕ್ಷಣಾ ಕ್ಷೇತ್ರದಲ್ಲಿ ಜೈವ ವೈದ್ಯಕೀಯ ಸಾಧನಗಳ ಆವಿಷ್ಕಾರ” ಕುರಿತು ಮಾತನಾಡಿದರು.

ಡಾ. ರಾಜಕುಮಾರ್ ಆಳಂದ್, ಸೀನಿಯರ್ ವೈಸ್ ಪ್ರೆಸಿಡೆಂಟ್, ಬಯೋಪ್ಲಸ್ ಲೈಫ್ ಸೈನ್ಸಸ್ ಪ್ರೈ. ಲಿ., “ನ್ಯೂಟ್ರಾಸೂಟಿಕಲ್ ಡೋಸೇಜ್ ಫಾರ್ಮ್ಸ್ – ಅಭಿವೃದ್ಧಿ ಮತ್ತು ಸವಾಲುಗಳು” ಕುರಿತು ಒಳನೋಟಗಳ ಕುರಿತಾದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶ್ರೀ ಸಂಕೀರ್ಣ ಪೈ, ಬ್ಯುಸಿನೆಸ್ ಡೆವಲಪ್ಮೆಂಟ್ ಹೆಡ್, ಹ್ಯಾಂಗ್ಯೊ ಐಸ್‌ಕ್ರೀಮ್ಸ್ ಪ್ರೈ. ಲಿ., ಬಿಯಾಂಡ್ ದಿ ಸ್ಕೂಪ್: ಸಾಂಪ್ರದಾಯಿಕ ಉದ್ಯಮದಲ್ಲಿ ಆವಿಷ್ಕಾರ ಮತ್ತು ಸುಸ್ಥಿರತೆ ಕುರಿತಂತೆ ಮಾತನಾಡಿದರು.
ಮಣಿಪಾಲ-ಕರ್ನಾಟಕ ಬಯೋಇಂಕ್ಯುಬೇಟರ್ ಸಿಇಒ ಡಾ. ಮನೇಶ್ ಥಾಮಸ್ ಮಾತನಾಡಿ
ಇಂದಿನ ಎಕ್ಸ್ಪೋ, ವಿಭಿನ್ನ ಹಿತಾಸಕ್ತಿಗಳನ್ನು ಒಂದೇ ವೇದಿಕೆಯಲ್ಲಿ ತಂದು ಅವರ ಆಲೋಚನೆ ಸಾಮರ್ಥ್ಯಗಳನ್ನು ಬಿಂಬಿಸಲು ಅವಕಾಶ ನೀಡಿದೆ. ಪ್ರಸ್ತುತಪಡಿಸಲಾದ ಆವಿಷ್ಕಾರಗಳ ಗುಣಮಟ್ಟ, ಚರ್ಚೆ ನಡೆಯಲ್ಪಟ್ಟ ವಿಷಯದ ಆಳ ಮತ್ತು ವಿದ್ಯಾರ್ಥಿ ಆವಿಷ್ಕಾರಕರ ಉತ್ಸಾಹ – ಇವುಗಳಿಂದ ಕರ್ನಾಟಕ, ವಿಶೇಷವಾಗಿ ಮಣಿಪಾಲ ಪರಿಸರ ವ್ಯವಸ್ಥೆ, ಭಾರತದ ಸ್ಟಾರ್ಟ್-ಅಪ್ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂಬ ನಂಬಿಕೆ ಗಟ್ಟಿಯಾಗಿದೆ. ಇಂದು ನಿರ್ಮಾಣವಾದ ಪಾಲುದಾರಿಕೆಗಳು ಮತ್ತು ಆರಂಭವಾದ ಹೂಡಿಕೆ ಚರ್ಚೆಗಳು ನಮ್ಮ ಉದ್ಯಮಶೀಲ ಪರಿಸರದಲ್ಲಿ ದೀರ್ಘಕಾಲೀನ ಪರಿಣಾಮ ಬೀರುತ್ತವೆ ಎಂದು ಹೇಳಿದರು. ಕೃತಕ ಬುದ್ಧಿಮತ್ತೆಯ ಪರಿವರ್ತಕ ಪರಿಣಾಮವನ್ನು ಅನ್ವೇಷಿಸಿದ ಪ್ಯಾನೆಲ್ ಚರ್ಚೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆರೋಗ್ಯ ಸೇವೆ, ವ್ಯವಹಾರ, ಶಿಕ್ಷಣ ವಿಧಾನಗಳು ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಎಐ ಪಾತ್ರವನ್ನು ತಜ್ಞರು, ಸಂಶೋಧನಾ ಕ್ಷೇತ್ರದ ಪರಿಣಿತರು ಹಾಗೂ ಚಿಂತಕರು ಆಳವಾಗಿ ಚರ್ಚಿಸಿದರು.
ಮಾಹೆ ಸ್ಥಾಪಿಸಿರುವ ತಂತ್ರಜ್ಞಾನ ವ್ಯವಹಾರ ಇಂಕ್ಯುಬೇಟರ್ M-GOKB ಈ ಯಶಸ್ವಿ ಉಪಕ್ರಮದ ಹಿಂದಿನ ಪ್ರಮುಖ ಚಾಲಕ ಶಕ್ತಿಯಾಗಿದ್ದು ಇದು ಕರ್ನಾಟಕ ಇನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆ ಐ ಟಿ ಎಸ್), ಕರ್ನಾಟಕ ಸರ್ಕಾರ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಬಿ ಐ ಆರ್ ಎ ಸಿ, ಭಾರತ ಸರ್ಕಾರದ ಬೆಂಬಲಿತವಾಗಿದೆ.

ಈ ಎಕ್ಸ್ಪೋವನ್ನು ಮಣಿಪಾಲ-ಕರ್ನಾಟಕ ಸರ್ಕಾರ ಬಯೋಇಂಕ್ಯುಬೇಟರ್ (ಎಂಜಿಓಕೆ ಬಿ), ಮಣಿಪಾಲ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇಂಕ್ಯುಬೇಟರ್ (ಎಂ ಯು ಟಿ ಬಿ ಐ), ಎಂಐಡಿಎಎಸ್ (ಮೆಡಿಕಲ್ ಇನ್ಸ್ಟ್ರುಮೆಂಟ್ಸ್, ಡಿವೈಸಸ್ ಅಂಡ್ ಅಲೈಡ್ ಸರ್ವಿಸಸ್) ಡಿ ಎಸ್ ಟಿ ಮಾಹೆ ಹಬ್, ಇನೋವೇಷನ್ ಸೆಂಟರ್, ಎಂ ಸಿ ಎಚ್ ಪಿ (ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್), ಎನ್ ಸಿ ಓ ಪಿ ಎಸ್ (ಮಣಿಪಾಲ ಕಾಲೇಜ್ ಆಫ್ ಫಾರ್ಮಸೂಟಿಕಲ್ ಸೈನ್ಸ್), ಮತ್ತು ಡಿಬಿಎಂಎಸ್ (ಡಿಪಾರ್ಟ್‌ಮೆಂಟ್ ಆಫ್ ಬೇಸಿಕ್ ಮೆಡಿಕಲ್ ಸೈನ್ಸಸ್) ಮಾಹೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಯಿತು. ಟೈ ಮಂಗಳೂರು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ ಡಿ ಇ ಎಂ), ಜಿಸಿಎಸ್ಇ – ಸರಸ್ವತ್ ಚೇಂಬರ್, ಪವರ್ ಗ್ರೂಪ್ ಮಣಿಪಾಲ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವುಗಳ ಸಕ್ರಿಯ ಸಹಯೋಗದಿಂದ ಈ ಈ ಕಾರ್ಯಕ್ರಮವು ಮತ್ತಷ್ಟು ಯಶಸ್ವಿಯಾಗಿ ನಡೆಯಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುರಿತು:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದು ಇನ್ಸ್ಟಿಟ್ಯೂಷನ್ ಆಫ್ ಎಮಿನಾನ್ಸ್ ಸ್ಥಾನಮಾನ ಪಡೆದ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್ಮೆಂಟ್ ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್, ಹಾಗೂ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ 400 ಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಮಾಹೆ ತನ್ನ ಅಂಗ ಸಂಸ್ಥೆಗಳ ಮೂಲಕ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೇದ್ ಪುರ ಹಾಗೂ ದುಬೈ ನ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಶ್ರೇಷ್ಠ ಶೈಕ್ಷಣಿಕ ದಾಖಲಾತಿ, ಆಧುನಿಕ ಮೂಲಸೌಕರ್ಯ, ಮತ್ತು ಪ್ರಮುಖ ಸಂಶೋಧನಾ ಕೊಡುಗೆಗಳೊಂದಿಗೆ ಮಾಹೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಮತ್ತು ಗೌರವ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತದ ಶಿಕ್ಷಣ ಸಚಿವಾಲಯ ಮಾಹೆ ಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನನ್ಸ್ ಸ್ಥಾನಮಾನ ನೀಡಿತು. ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್‌ಎಫ್) ನಲ್ಲಿ ಮಾಹೆ ನಾಲ್ಕನೇ ಸ್ಥಾನದಲ್ಲಿ ಇದೆ . ಬದಲಾವಣೆಯ ಶಿಕ್ಷಣ ಹಾಗೂ ಸಮೃದ್ಧ ಕ್ಯಾಂಪಸ್ ಜೀವನಕ್ಕಾಗಿ ವಿದ್ಯಾರ್ಥಿಗಳ ಅಗ್ರ ಆಯ್ಕೆ ಮಾಹೆ ಆಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೂ ಶ್ರೇಷ್ಠ ಪ್ರತಿಭೆಗಳ ತಾಣವಾಗಿ ಮಾಹೆ ಗುರುತಿಸಲ್ಪಟ್ಟಿದೆ.








