ಉಡುಪಿ, ಜು.21: ಲಕ್ಷಾಂತರ ರೂ. ವೌಲ್ಯದ ಅಡಿಕೆ ಕಳ್ಳತನ ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ಎರಡು ತಿಂಗಳ ಹಿಂದೆ ನಡೆದಿತ್ತು ಈ ಪ್ರಕರಣ ಕ್ಕೆ ಸಂಬಂಧಿಸಿ ಈ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದ.ಕ. ಜಿಲ್ಲೆಯ ಕಡಬ ತಾಲೂಕಿನ ಬಾಳ್ತಿಲ ಗ್ರಾಮ ನೂಜಿ ಮಾವಿನಕಟ್ಟೆಯ ಸಂತೋಷ(35), ಭಟ್ಕಳ ಗುಳ್ಮಿ ನಿವಾಸಿಗಳಾದ ಧಾರವಾಡ ಮೂಲದ ಶಾನೂರು ಬಾಬುಲಾಲ್ ನವಾಜ್(31), ಖ್ವಾಜಾ ಮಹಮ್ಮದ್(26), ಮಹಮ್ಮದ್ ಸಾಧಿಕ್(27) ಬಂಧಿತ ಆರೋಪಿಗಳು. ಬಂಧಿತರಿಂದ ಕಳವು ಮಾಡಿದ 455 ಕೆ.ಜಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿಕತ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಡಿನಗದ್ದೆಯ ಮಸೂದ್ ಪಟೇಲ್ ಎಂಬವರು ತನ್ನ ತೋಟ ಬೆಳೆದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಗೋಡೌನ್ನಲ್ಲಿ ಇಟ್ಟಿದ್ದರು. ಮೇ 15ರಿಂದ ಮೇ 22ರ ಮಧ್ಯಾವಧಿಯಲ್ಲಿ ಕಳ್ಳರು ಗೋಡೌನ್ ಬೀಗ ಮುರಿದು ಒಳನುಗ್ಗಿ ಒಟ್ಟು 5.60ಲಕ್ಷ ರೂ. ವೌಲ್ಯದ ಅಡಿಕೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿತ್ತು. ಅದರಂತೆ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಇದರ ತನಿಖೆ ಮತ್ತು ಆರೋಪಿಗಳ ಪತ್ತೆಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ್ ಹಾಗೂ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸವೀತ್ರ ತೇಜ್ ನಿರ್ದೇಶನದಲ್ಲಿ ಬೈಂದೂರು ಎಸ್ಸೈಗಳಾದ ತಿಮ್ಮೇಶ್ ಬಿ.ಎನ್., ನವೀನ ಬೋರಕರ, ಕೊಲ್ಲೂರು ಎಸ್ಸೈ ವಿನಯ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಾಗೇಂದ್ರ, ಕೊಲ್ಲೂರು ಠಾಣೆ, ಸುರೇಶ್, ಚಿದಾನಂದ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ, ರವೀಂದ್ರ, ಅಶೋಕ, ಹಾಗೂ ಚಂದ್ರ ಪಾಲ್ಗೊಂಡಿದ್ದರು








