ಉಡುಪಿ: ಜುಲೈ 19: ಜೂನ್ ತಿಂಗಳು ಪೂರ್ತಿ ಮಳೆಗಾಳಿಯಿಂದ ಮೀನುಗಾರಿಕೆಗೆ ಪೂರಕವಾಗಿರಲಿಲ್ಲ. ಜು. 1ರಿಂದ ಸಮುದ್ರ ತಿಳಿಗೊಂಡಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ವರ್ಗದ ನಾಡದೋಣಿ ಮೀನುಗಾರಿಕೆ ಆರಂಭವಾಗಿತ್ತು. ಮೀನುಗಾರಿಕೆಗೆ ತೆರಳಿದ ನಾಡದೋಣಿಗಳಿಗೆ ಮಧ್ಯೆ ಮಧ್ಯೆ ಅಲ್ಪ ಪ್ರಮಾಣದ ಸಿಗಡಿ ಮೀನು ದೊರಕಿತ್ತು.
ಆದ್ರೆ ಇದೀಗ ಸಮುದ್ರದಲ್ಲಿ ಒಂದೇ ಸವನೆ ವೇಗವಾದ ಗಾಳಿ ಬೀಸುತ್ತಿರುವುರಿಂದ ಕಡಲು ಪ್ರಕ್ಷುಬ್ಧಗೊಂಡು ಬೃಹತ್ ಗಾತ್ರದ ಅಲೆಗಳು ಏಳುತ್ತಿವೆ. ಇದರಿಂದಾಗಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಸ್ಥಗಿತಗೊಂಡಿದೆ.
ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿರುವುದರಿಂದ ದೋಣಿಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಮೀನಿಗೆ ಬಲೆ ಹಾಕಲು ಕಷ್ಟ ಸಾಧ್ಯವಾಗಿದೆ ಎನ್ನತ್ತಾರೆ ಮೀನುಗಾರರು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಬಹುತೇಕ ಎಲ್ಲ ವರ್ಗದ ನಾಡದೋಣಿಗಳು ದಡ ಸೇರಿ ಲಂಗರು ಹಾಕಿದೆ.