ಕಾರ್ಕಳ: ಜುಲೈ 16:ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನಲ್ಲಿ ದಿನಾಂಕ 14 .07.2025 ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ, ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ನಿವೃತ್ತ ಸಿಎ ಕೆ ಕಮಲಾಕ್ಷ ಕಾಮತ್ ಇವರು ನೀಡಿದ ಕಂಪ್ಯೂಟರ್ಗಳ ಉದ್ಘಾಟನಾ ಕಾರ್ಯಕ್ರಮವು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಲೇಜಿನ ರೇಂಜರ್ಸ್ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಶ್ರೀಮತಿ ಸುಚೇತ ಕಾಮತ್ ಸ್ವಾಗತಿಸಿದರು . ಏರ್ ಇಂಡಿಯಾ ನಿವೃತ್ತ ಉದ್ಯೋಗಿ
ಶ್ರೀ ಭವಾನಿ ಶಂಕರ್ ಹೆಗ್ಡೆಯವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾರ್ಥಿ ಸಂಘದ ಸಂಚಾಲಕ,ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಜಗದೀಶ್ ನಾಯಕ್ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾಲೇಜಿಗೆ ತಾನು ನೀಡಿದ ಕಂಪ್ಯೂಟರ್ ಗಳನ್ನು ಉದ್ಘಾಟಿಸಿದ ನಿವೃತ್ತ ಸಿ ಎ, ಕೆ. ಕಮಲಾಕ್ಷ ಕಾಮತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ
ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿದ್ಯೆ,ವಿನಯ, ಸಂಸ್ಕೃತಿ ,ಸಂಸ್ಕಾರ, ನಮ್ರತೆಯ ಜೊತೆಗೆ ಆತ್ಮವಿಶ್ವಾಸ ಮೂಡಿಸಿಕೊಂಡು, ಜೀವನ ಧರ್ಮವನ್ನು ಪಾಲಿಸಿಕೊಂಡು, ರಾಮನ ನಡೆ ಕೃಷ್ಣನ ನುಡಿಯಂತೆ ನಡೆದುಕೊಂಡು,ಸದ್ಗುಣಗಳನ್ನು ಮೈಗೂಡಿಸಿಕೊಂಡು , ಬದುಕು ಬಂಗಾರವಾಗಿಸಬೇಕು. ನಮ್ಮ ದೆನ್ನುವುದು ಈ ಕ್ಷಣ ಮಾತ್ರ. ಎಂಬ ಸ್ಪೂರ್ತಿಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾದ ನಿವೃತ್ತ ಶಿಕ್ಷಕಿ ಶ್ರೀಮತಿ ಸಾವಿತ್ರಿ ಮನೋಹರ್ ರವರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವು ಕಾಲೇಜಿನ ಶಿಸ್ತು ಮತ್ತು ಒಗ್ಗಟ್ಟನ್ನು ಪಾಲಿಸುತ್ತಾ ,ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳುತ್ತಾ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಹಿರಿಯರಾದ ಶಿಕ್ಷಣ ತಜ್ಞ ಸಾಣೂರು ಮೋಹನ್ ದಾಸ್ ಜಿ. ಪ್ರಭುರವರು ಕಾಲೇಜಿನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
2024- 2025 ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಳೆದ ಸಾಲಿನಲ್ಲಿ ನಡೆಸಿದ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಣ್ಯರೊಂದಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಣ್ಣಿ ಮೇರ ಹಾಗೂ ಅಬ್ದುಲ್ ಲತೀಫ್, ಹಿತೈಷಿಗಳಾದ ಸಾಣೂರಿನ ಆನಂದ ಶೆಟ್ಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಆಂಗ್ಲಭಾಷಾ ಉಪನ್ಯಾಸಕಿ ಡಾ.ಸುಮತಿ ಪಿ ಕಾರ್ಯಕ್ರಮ ನಿರೂಪಿಸಿದರು, ಇತಿಹಾಸ ಉಪನ್ಯಾಸಕಿ ಶ್ರೀಮತಿ ಸೀಮಾ ರೈ ವಂದಿಸಿದರು.
.