ಬೆಂಗಳೂರು :ಜುಲೈ 09:ಬೆಂಗಳೂರಿನ ಚಾನ್ಸರಿ ಪೆವಿಲಿಯನ್‌ನಲ್ಲಿ ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ನಟಿಯರ ಹಬ್ಬ ಕ್ವೀನ್ಸ್ ಪ್ರೀಮಿಯರ್ ಲೀಗ್ 2ನೇ ಸೀಸನ್ ಕ್ರೀಡೋತ್ಸವದ ಲೋಗೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ನಟಿ ರಮ್ಯಾ, ನಟರಾದ ಅನಿರುಧ್, ನಿರೂಪ್ ಭಂಡಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮಾಜಿ ಶಾಸಕಿ ಸೌಮ್ಯರೆಡ್ಡಿ, ನಿರ್ಮಾಪಕ ಎನ್.ಎಂ.ಸುರೇಶ್, QPL ಸ್ಥಾಪಕರಾದ ಮಹೇಶ್ ಗೌಡ, ಹಾಗೂ ಖ್ಯಾತ ನಟ ಮತ್ತು QPL ಸಮಿತಿಯ ಸದಸ್ಯ ಪ್ರಮೋದ್ ಶೆಟ್ಟಿ ಒಟ್ಟಾಗಿ ಲೋಗೋ ಅನಾವರಣಗೊಳಿಸಿದರು.
ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಗ್ರೀಕ್ ಮೂಲದ ಎಲಿ ಅವ್ರಾಮ್ ಅವರನ್ನೊಳಗೊಂಡ ತಂಡದಿಂದ ಫ್ಯಾಷನ್ ಶೋ ನಡೆಸಲಾಯಿತು. ಇದು QPL ಎರಡನೇ ಆವೃತ್ತಿಗೆ ಚಾಲನೆಯಾಗಿದ್ದು, 10 ತಂಡಗಳನ್ನೊಳಗೊಂಡ ಟೂರ್ನಮೆಂಟ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
ಈ ಕ್ರೀಡೋತ್ಸವದ ಕುರಿತು ಮಾತನಾಡಿದ ರಮ್ಯಾ, ಈಗಲೂ ಕ್ರೀಡೆ ಎಂದರೆ ಪುರುಷ ಪ್ರಧಾನವಾದುದು. ಚಿತ್ರರಂಗದಲ್ಲಿ ಮಹಿಳೆಯರನ್ನು ಗುರುತಿಸುವುದು ಕಡಿಮೆ. ಆದರೆ ಇತ್ತೀಚೆಗೆ ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಾನು ಮಕ್ಕಳು ಯಾವತ್ತೂ ಹೊರಗಡೆ ಆಡುವುದುನ್ನು ನೋಡಿಲ್ಲ. ಮೊಬೈಲ್ ಬಂದಮೇಲೆ ಅದರಲ್ಲೇ ಗೇಮ್, ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಟೂರ್ನಮೆಂಟ್ ಆಡಿಸುತ್ತಿರೋದು ಗ್ರೇಟ್ ಕಾನ್ಸೆಪ್ಟ್ ಎಂದು ರಮ್ಯಾ ಬಣ್ಣಿಸಿದರು. ಮೊದಲೆಲ್ಲಾ ನಾನೂ ಕೂಡ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡಿದ್ದೇನೆ. ಕುಳ್ಳಗಿದ್ದರೂ ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಆಡಿ ಟೂರ್ನಮೆಂಟ್ ಜಯಿಸಿದ್ದೇವೆ. ಈ ಟೂರ್ನಮೆಂಟ್‌ನಿಂದ ಮಹಿಳಾ ಸೆಲೆಬ್ರಿಟಿಗಳ ಟ್ಯಾಲೆಂಟ್, ಕಲಿಕೆ, ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ ಎಂದರು.
ಮೊದಲ ಆವೃತ್ತಿಯಲ್ಲಿ ಕ್ರಿಕೆಟ್ ಮಾತ್ರ ಆಡಿಸಿ ಯಶಸ್ವಿಗೊಳಿಸಲಾಗಿದ್ದು, ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ.. ಕ್ರಿಕೆಟ್, ಬೀಚ್ ಕ್ರಿಕೆಟ್, ಬ್ಯಾಡ್ಮಿಂಟನ್, ಟಗ್ ಆಫ್ ವಾರ್, ಲಗೋರಿ, ಪಿಕೆಲ್ ಬಾಲ್, ಚೆಸ್, ಕೇರಮ್, ವಾಟರ್ ಪೊಲೊ ಸೇರಿದಂತೆ 12 ಗೇಮ್‌ಗಳನ್ನು ಆಡಿಸಲಾಗುತ್ತದೆ. ಕಳೆದ ಬಾರಿ ಸೀಸನ್‌ನಲ್ಲಿ ನಟಿ ಕಾರುಣ್ಯರಾಮ್., ಸಪ್ತಮಿ ಗೌಡ, ಧನ್ಯಾ ರಾಮ್‌ಕುಮಾರ್, ಭವ್ಯಾಗೌಡ ಸೇರಿದಂತೆ ಹಲವರು ತಾರೆಯರು ಮಿಂಚಿದ್ದು, ಈ ಬಾರಿ ಸೀಸನ್‌ನಲ್ಲೂ ಮಿಂಚಲು ನಟಿಯರು, ಆಂಕರ್‌ಗಳು, ಸಿಂಗರ್‌ಗಳು ರೆಡಿಯಾಗಿದ್ದಾರೆ. ಸಿನಿ ತಾರೆಗಳು ತಾವು ಫಿಟ್ ಆಗಿ ಉಳಿಯಲು ಸಮಯ ಒದಗಿಸುತ್ತಿರುವುದೇ ಯುವ ಜನತೆಗೆ ಪ್ರೇರಣೆಯಾಗಿದೆ. ನಿಜವಾದ ಸಬಲೀಕರಣ ನಿಜವಾದ ಭಾಗವಹಿಸುವಿಕೆಯಿಂದ ಶುರುವಾಗುತ್ತದೆ ಎಂದು QPL ಸಂಸ್ಥಾಪಕ ಮಹೇಶ್ ಗೌಡ ತಿಳಿಸಿದರು.