ಉಡುಪಿ, ಜುಲೈ 08: ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಹಾಗೂ ಕೌಶಲ್ಯ ಕೇಂದ್ರ ಸ್ಥಾಪನೆ ನಿರ್ಧಾರ ವಿರೋಧಿಸಿ ಹೈಕೋರ್ಟ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9 ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮುಷ್ಕರ ಜಿಲ್ಲೆಯಲ್ಲಿ ಉಡುಪಿ ಕುಂದಾಪುರ ಮತ್ತು ಬೈಂದೂರುಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ
ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ನಡೆದ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕರ ಮಕ್ಕಳಿಗೆ 1125 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿಧಿ ಬಳಸಿ ವಸತಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿರುವ ಕ್ರಮವನ್ನು ಸಿಐಟಿಯುಗೆ ಸೇರಿದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ತನ್ನ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದೆ.
ಇದೇ ಸಂದರ್ಭದಲ್ಲಿ ಹೈಕೋರ್ಟ್ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಬೇಕು ಎಂದು ಒತ್ತಾಯಿಸಿ ಮತ್ತು ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ್ಯಾಂತ ಲಕ್ಷಾಂತರ ಕಟ್ಟಡ ಕಾರ್ಮಿಕರು ಜುಲೈ 9ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ.
ಇದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಸಹ ಮುಷ್ಕರ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಉಡುಪಿ, ಕುಂದಾಪುರ ಮತ್ತು ಬೈಂದೂರು ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯುಗೆ ಸೇರಿದ ಉಡುಪಿ ಜಿಲ್ಲಾಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.