ಮಣಿಪಾಲ, ಜೂ. 26: ಇಲ್ಲಿನ ಮಾಹೆಯಲ್ಲಿ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್) ಎ.ವಿ. ಬಾಳಿಗಾ ಶಿಕ್ಷಣ ಸಂಸ್ಥೆಗಳು, ಪ್ರೌಢಪೂರ್ವ ಶಿಕ್ಷಣ ಇಲಾಖೆ – ಕರ್ನಾಟಕ (ಉಡುಪಿ ಜಿಲ್ಲೆ), ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ವ್ಯಾಪಾರದ ವಿರುದ್ಧದ ಅಂತಾರಾಷ್ಟ್ರೀಯ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್, ಐಪಿಎಸ್, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಾದಕ ದ್ರವ್ಯ ಬಳಕೆಯನ್ನು ತಡೆಯುವಲ್ಲಿ ಸಮಾಜದ ಹಾಗೂ ಜವಾಬ್ದಾರಿಯುತ ನಾಗರಿಕರ ಹೊಣೆಗಾರಿಕೆ ಬಗ್ಗೆ ಮಾಹಿತಿ ನೀಡಿದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೈತಿಕ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರದ ಮಹತ್ವವನ್ನು ಅವರು ವಿವರಿಸಿದರು. ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಲೀಲಾಬಾಯಿ ಭಟ್ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡು, ಮಾದಕ ಸೇವೆ ತಡೆಯುವ ನಿಟ್ಟಿನಲ್ಲಿ ಕುಟುಂಬ ಹಾಗೂ ಸಮುದಾಯದ ಬೆಂಬಲದ ಮಹತ್ವವನ್ನು ವಿವರಿಸಿದರು.
ಎಂ.ವಿ. ಬಾಳಿಗಾ ಸಂಸ್ಥೆಗಳ ನಿರ್ದೇಶಕರಾದ ಡಾಕ್ಟರ್ ಪಿ.ವಿ. ಭಂಡಾರಿ ಇಡೀ ದಿನ ಕಾರ್ಯಕ್ರಮದ ಪಕ್ಷಿ ನೋಟವನ್ನು ನೀಡಿದರು.
ಮಾಹೆಯ ಡಾ. ಅರವಿಂದ್ ಪಾಂಡೆ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರತಿಜ್ಞೆಯನ್ನುವಾಚಿಸಿ, ಎಲ್ಲರನ್ನೂ ಮಾದಕ ಸೇವೆ ವಿರುದ್ಧ ಒಂದಾಗಿ ನಿಲ್ಲಲು ಪ್ರೇರೇಪಿಸಿದರು.
ಮಣಿಪಾಲ ಕೆಎಂಸಿಯ ಡೀನ್ ಡಾ. ಅನಿಲ್ ಭಟ್, ಅಸೋಸಿಯೇಟ್ ಡೀನ್ ಡಾ. ವಿನೋದ್ ಸಿ ನಾಯಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನ ಸಂಶೋಧನಾ ವಿದ್ಯಾರ್ಥಿನಿ ಅನುಶ್ರೀ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಾಹೆ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕಿ ಡಾ. ಗೀತಾ ಮಯ್ಯ ಸ್ವಾಗತಿಸಿ, ಮಾಹೆ ವಿದ್ಯಾರ್ಥಿ ಕಲ್ಯಾಣ ಇ
ಉಪನಿರ್ದೇಶಕಿ ಡಾ. ರಶ್ಮಿ ಯೋಗೇಶ್ ಪೈ ವಂದಿಸಿದರು. ಡಾ. ರೀನಾ ಪರ್ವೀನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದ ಉದ್ದೇಶ, ಯುವಜನತೆ ಹಾಗೂ ಸಾರ್ವಜನಿಕರಲ್ಲಿ ಮಾದಕ ದ್ರವ್ಯ ಸೇವೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಮಾದಕವಸ್ತು ಮುಕ್ತ ಸಮಾಜವನ್ನು ಪ್ರಚಾರ ಮಾಡುವುದಾಗಿದೆ. ಸಮಾಜದ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಮಾದಕ ಸೇವೆ ತಡೆಗೆ ಮಾಹೆ ಹಾಗೂ ವಿವಿಧ ಸಹಭಾಗಿ ಸಂಸ್ಥೆಗಳ ಸಮಾಜ ಪ್ರಜ್ಞೆ ಮತ್ತು ದೃಢಬದ್ಧತೆಯನ್ನು ಪ್ರತಿಬಿಂಬಿಸಿತು.