ಉಡುಪಿ : ಜೂನ್ 20:ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದು ದಿನಾಂಕ 20-06-2025 ರಂದು ಉಡುಪಿ ಜಿಲ್ಲಾ ಪಂಚಾಯತ್ ಡಾll ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಪ್ರಗತಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ಪಡೆದರು
ಜಿಲ್ಲೆಯ ಜ್ವಲಂತ ಸಮಸ್ಯೆ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದರು
ಸಭೆಯಲ್ಲಿ ಗಣಿ ಇಲಾಖೆಯ ಮರಳು ಪೂರೈಕೆ ಸಮಸ್ಯೆ, ಮಲ್ಪೆ ಮೀನುಗಾರಿಕಾ ಬಂದರು ಸಮರ್ಪಕ ನಿರ್ವಹಣೆ ವೈಫಲ್ಯ, ಬಂದರು ಇಲಾಖೆಯ ಅಭಿವೃದ್ದಿ ಕಾಮಗಾರಿಗಳ ಪ್ರಗತಿ, ಪ್ರವಾಸೋದ್ಯಮ, ನೂತನ ಜಿಲ್ಲಾಸ್ಪತ್ರೆ ಕಟ್ಟಡ, ಎಂ ಆರ್ ಐ ಸ್ಕ್ಯಾನಿಂಗ್ ಸೇವೆ ಸಮಸ್ಯೆ, ಸಹಿತ ವಿವಿಧ ಇಲಾಖೆಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹಾರಕ್ಕೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಆಗ್ರಹ ಮಾಡಿದರು.
ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಅವರು ಮಾತನಾಡಿ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಅನುದಾನ ಮಂಜೂರು ಮಾಡುವಂತೆ ಮತ್ಸ್ಯಾಶ್ರಯ ಯೋಜನೆ ಅಡಿಯಲ್ಲಿ ಕಾಪು ಕ್ಷೇತ್ರಕ್ಕೆ ಹೆಚ್ಚುವರಿ ಮನೆಗಳನ್ನು ಹಂಚಿಕೆ ಮಾಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಜೊತೆಗೆ ಸ್ಥಳೀಯ ಯೋಜನಾ ಪ್ರದೇಶದ ಹೊರ ಭಾಗದಲ್ಲಿನ 1 ಎಕ್ರೆ ಗಿಂತ ಕಡಿಮೆ ಇರುವ ಪ್ರದೇಶ ಮತ್ತು ಏಕ ನಿವೇಶನ ವಸತಿ/ವಸತಿಯೇತರ ಭೂ ಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ವಹಿಸಿರುವುದರಿಂದ ಸಾರ್ವಜನಿಕರು ತೊಂದರೆಕ್ಕೀಡಾಗಿರುತ್ತಾರೆ. ಈ ಹಿಂದಿನಂತೆಯೇ 0.25 ಎಕ್ರೆ ನಿವೇಶನವನ್ನು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಹಾಗೂ 0.25 ಎಕ್ರೆ ಇಂದ 1 ಎಕ್ರೆ ವರೆಗಿನ ಜಮೀನುಗಳ ವಿನ್ಯಾಸ ಅನುಮೋದನೆಯನ್ನು ತಾಲೂಕು ಪಂಚಾಯತ್ ನಲ್ಲಿ ಅನುಮೋದನೆ ನೀಡುವ ಬಗ್ಗೆ ಪ್ರಸ್ತುತ ಏಕ ವಿನ್ಯಾಸ ಅನುಮೋದನೆಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ನೀಡಿರುವುದರಿಂದ ಕಾಪು ಯೋಜನ ಪ್ರಾಧಿಕಾರದಲ್ಲಿ ನಗರ ಯೋಜನಾ ಸದಸ್ಯರು(ಟಿ.ಪಿ.ಎಮ್) ವಾರಕ್ಕೆ ಒಂದು ದಿನ ನಿಯೋಜನೆಯಲ್ಲಿರುವುದರಿಂದ ಕಡತಗಳ ವಿಲೇವಾರಿಯಲ್ಲಿ ವಿಳಂಬತೆಯಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದು ವಸತಿ /ವಾಣಿಜ್ಯ ಕಟ್ಟಡವನ್ನು ನಿರ್ಮಿಸುವಲ್ಲಿ ಸಮಸ್ಯೆಗಳಾಗಿರುತ್ತದೆ. ಕರಾವಳಿಯಲ್ಲಿ ಗ್ರಾಮ ಠಾಣಾ ಪ್ರಕ್ರಿಯೆ ಇಲ್ಲದೆ ಇದ್ದು ಹೆಚ್ಚಿನವರು ತುಂಡು ಭೂಮಿಯನ್ನು ಹೊದಿದವರಾಗಿರುತ್ತಾರೆ. ಇದರಿಂದಾಗಿ ನಿವೇಶನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲ ಮಿತಿ ಇದ್ದು ಪ್ರಾಧಿಕಾರದವರು ಷರತ್ತಿನಲ್ಲಿ ವಿಧಿಸಿರುವ ರಸ್ತೆ ಪರಿಮಿತಿಯನ್ನು ಬಿಟ್ಟುಕೊಡಲು ಕಷ್ಟಸಾದ್ಯವಾಗಿರುತ್ತದೆ. ಆದ್ದರಿಂದ ಈ ಹಿಂದಿನಂತೆಯೇ ಸ್ಥಳೀಯ ಯೋಜನಾ ಪ್ರದೇಶದ ಒಂದು ಎಕ್ರೆ ಕಡಿಮೆ ಇರುವ ಭೂ ಪ್ರದೇಶದ ಏಕ ವಿನ್ಯಾಸ ಅನುಮೋದನೆಯನ್ನು ಗ್ರಾಮ ಹಾಗೂ ತಾಲೂಕು ಪಂಚಾಯತ್ ಮಟ್ಟದಲ್ಲಿಯೇ ಅನುಮತಿ ನೀಡುವ ಬಗ್ಗೆ ನಿರ್ಣಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಮಂಡಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರತೀಕ್ ಬಾಯಲ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ನಾಯಕ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.