ಮೇ 14: ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಂಚಾರ ಮಾಡಿ ಆತಂಕ ಸೃಷ್ಟಿ ಮಾಡಿದ ಕಾಡಾನೆ ಕುಳ್ಳ ಕೊನೆಗೂ ಲಾಕ್ ಆಗಿದೆ. ಕುಳ್ಳನ ಸೆರೆಗಾಗಿ ಕಳೆದ ನಾಲ್ಕು ದಿನದಿಂದ ಮೂಡಿಗೆರೆ ತಾಲೂಕಿನಲ್ಲಿ ಕಾರ್ಯಚರಣೆ ನಡೆದಿತ್ತು. ತನ್ನ ಹಿಡಿಯಲು ಭೀಮಾ ಟೀಮ್ ಎಂಟ್ರಿ ಯಾಗಿದೆ ಎಂಬ ಚಿಕ್ಕ ಸುಳಿವು ಸಿಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಕುಳ್ಳ ಕುಮ್ಕಿ ಆನೆ ಭೀಮ, ಏಕಲವ್ಯ ಟೀಮ್ ನಡೆಸಿದ ಕಾರ್ಯಚರಣೆಯಲ್ಲಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಮೂಡಿಗೆರೆ ತಾಲೂಕಿನಲ್ಲಿ ಕಳೆದ ನಾಲ್ಕು ದಿನದಿಂದ ಭೀಮ ಟೀಮ್ ನೇತೃತ್ವದಲ್ಲಿ ಕುಳ್ಳ ಒಂಟಿ ಸಲಗದ ಸೆರೆಗಾಗಿ ಕಾರ್ಯಚರಣೆ ನಡೆದಿತ್ತು. ನಿರಂತರವಾಗಿ ನಡೆದ ಕಾರ್ಯಚರಣೆಯಲ್ಲಿ ಕುಳ್ಳ ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಲಾಕ್ ಆಗಿದ್ದಾನೆ.
ಕುಳ್ಳ ಅಂತಾನೆ ಖ್ಯಾತಿ ಪಡೆದಿದ್ದ ಕಾಡಾನೆ, ಮಾನವರ ಮೇಲೆ ದಾಳಿಗೆ ಯತ್ನಿಸಿ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದ. ಹೆಚ್ಚು ಸಂಚಾರ ಮಾಡುತ್ತಿದ್ದ ಗ್ರಾಮಗಳಿಂದ ಕುಳ್ಳನ ಸೆರೆಗಾಗಿ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದರು. ಹಾಗಾಗಿ ಸರ್ಕಾರದಿಂದ ಸೆರೆ ಕಾರ್ಯಚರಣೆಗೆ ಅನುಮತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಕೊನೆಗೂ ಕುಳ್ಳ ನನ್ನ ಸೆರೆ ಹಿಡಿದಿದ್ದಾರೆ.
ಆನೆ ದಾಳಿಯ ಆತಂಕದಲ್ಲಿದ್ದ ಜನರು, ಲಾಕ್ ಆಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.