ಮಂಗಳೂರು: ಮೇ 03:ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಿಸಲು ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲಿ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ಯನ್ನು ರಚಿಸಲಿದ್ದೇವೆ.ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳೂರು ಶಾಂತಿಗೆ ಬರುತ್ತಿತ್ತು. ಕಳೆದ ನಾಲ್ಕೈದು ದಿನದಿಂದ ಆದ ಘಟನೆ ಮತ್ತು ನಿನ್ನೆ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ನಾವು ಇದನ್ನು ಹೀಗೆ ಮುಂದುವರಿಯಲು ಯಾವುದೇ ಕಾರಣಕ್ಕು ಬಿಡುವುದಿಲ್ಲ. ಆರೋಪಿಗಳ ಪತ್ತೆಗಾಗಿ ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಶೋಧ ನಡೆಸಿದ್ದಾರೆ. ಇನ್ನು ಮುಂದೆಯೂ ಇಂತಹ ಘಟನೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ಶಾಂತಿಯನ್ನು ಕಾಪಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮನವಿ ಮಾಡುತ್ತೇನೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿಮ್ಮ ಜೊತೆಯಲ್ಲಿದೆ. ಶಾಂತಿ ಕಾಪಾಡಲು ಎಲ್ಲ ರೀತಿಯ ಪ್ರಯತ್ನವನ್ನು ನಾವು ಮಾಡುತ್ತೇವೆ. ಈಗಾಗಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗಬಾರದು ಎಂಬ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ನಿನ್ನೆಯ ಘಟನೆಯ ಕುರಿತು ಸಂಪೂರ್ಣ ವರದಿ ಕೇಳಿದ್ದೇನೆ. ತನಿಖೆ ಆರಂಭಿಸಲಾಗಿದ್ದು ಆರೋಪಿಗಳನ್ನು ಬಿಡುವುದಿಲ್ಲ. ಇದನ್ನು ಹತ್ತಿಕ್ಕಲು ಎಲ್ಲ ರೀತಿಯ ಪ್ರಯತ್ನ, ಕ್ರಮ ಕೈಗೊಂಡಿದ್ದು, ಬೆಳೆಯಲು ಬಿಡುವುದಿಲ್ಲ. ಯಾವುದೇ ಪಕ್ಷ, ಸಂಘಟನೆಯವರು ಅಥವಾ ಬೇರೆ ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
.








