ಮಂಗಳೂರು: ಮಾರ್ಚ್ 21:ಕನ್ನಡ ಪರ ಸಂಘಟನೆಗಳು ಶನಿವಾರ (ಮಾ.22) ದಂದು ರಾಜ್ಯ ಬಂದ್ ಗೆ ನೀಡಿರುವ ಕರೆಗೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘ ಸ್ಪಂದಿಸುವುದಿಲ್ಲ ಎಂದು ತಿಳಿಸಿದೆ.
ಎಲ್ಲ ಸಂಘಟನೆಗಳ ಬೇಡಿಕೆಗೆ ನಮ್ಮ ಸಹಮತ, ಸಹಾನುಭೂತಿ ಇದೆ. ಬಸ್ ಮಾಲಕರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಶನಿವಾರ ಬಸ್ ಬಂದ್ ಮಾಡುವುದಿಲ್ಲ. ಇತರ ಸಾಮಾನ್ಯ ದಿನಗಳಂತೆ ಬಸ್ ಗಳು ಓಡಾಡಲಿವೆ. ಸಾವರ್ಜನಿಕರ ಹಿತದೃಷ್ಟಿ, ಮುಖ್ಯವಾಗಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಬಂದ್ ಮಾಡುವುದಿಲ್ಲ ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಜ್ ಪರ್ತಿಪಾಡಿ ತಿಳಿಸಿದ್ದಾರೆ.
ಬಸ್ ಬಂದ್ ಗೆ ಯಾವುದೇ ಸಂಘಟನೆಗಳು ನಮ್ಮನ್ನು ಕೇಳಿಕೊಂಡಿಲ್ಲ. ಸಾರ್ವಜನಿಕರಿಗೆ ಸಮಸ್ಯೆಯಾಗುವ ಕಾರಣದಿಂದ ಬಂದ್ ಮಾಡುವುದು ಕೂಡ ಇಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ








