ಕಾಪು:ಫೆಬ್ರವರಿ 27:ಉಡುಪಿಯ ಉದ್ಯಾವರದಲ್ಲಿ ಫೆ.12ರಂದು ಬೆಳಗಿನ ಜಾವ ಕೆನರಾ ಬ್ಯಾಂಕ್ ATM ಪ್ರವೇಶಿಸಿ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ಮಂಜನಾಡಿ ಸಮೀಪದ ಅಸೈಗೋಳಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (24) ಹಾಗೂ ಮಂಗಳೂರು ಕಣ್ಣೂರು ಪಡೀಲ್ ನಿವಾಸಿ ಯಾಸೀನ್(21) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿರುವ ದ್ವಿಚಕ್ರ ವಾಹನ, ಜಾಕೆಟ್, ಹೆಲೈಟ್, ಕ್ಯಾಪ್, ಹ್ಯಾಂಡ್ ಗೌಸ್, ಕತ್ತಿ ಹಾಗೂ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಫೆ.12ರಂದು ಬೆಳಗಿನ ಜಾವ ಉದ್ಯಾವರ ಕೆನರಾ ಬ್ಯಾಂಕ್ ATM ಪ್ರವೇಶಿಸಿ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಮಂಗಳೂರಿನ ಬಂದರನಲ್ಲಿ ಫೆ.26ರಂದು ಬೆಳಗ್ಗೆ ಬಂಧಿಸಿದ್ದಾರೆ.
ಈ ಕಾರ್ಯಾಚರಣೆ ಯಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್ ಮಾನೆ, ಪಡುಬಿದ್ರಿ ಠಾಣಾ ಪಿಎಸ್‌ಐ ಅನಿಲ್ ಕುಮಾರ್ ಟಿ ನಾಯ್ಕ, ಕಾಪು ಠಾಣೆಯ ಪಿಎಸ್‌ಐ ರಮೇಶ್ ನಾಯ್ ಹಾಗೂ ಕಾಪು ಠಾಣೆಯ ಸಿಬ್ಬಂದಿ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ ಪ್ರಸಾದ್, ಪಡುಬಿದ್ರಿ ಠಾಣೆಯ ಎ ಎಸ್ ಐ ರಾಜೇಶ್, ಸಿಬ್ಬಂದಿ ಸಂದೇಶ, ಶಿರ್ವ ಠಾಣೆ ಸಿಬ್ಬಂದಿ ಸಿದ್ದರಾಯ, ಜೀವನ್ ಪಾಲ್ಗೊಂಡಿದ್ದರು.