ಮಲ್ಪೆ: ಸೆಪ್ಟೆಂಬರ್ 07: ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮಲ್ಪೆಯ ಆಳಸಮುದ್ರ ಬೋಟು ಭಟ್ಕಳ ಸಮೀಪ ತೆಂಗಿನಗುಂಡಿ ಬಂದರು ಬಳಿ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಗುರುವಾರ ಸಂಜೆ ಮುಳುಗಡೆಗೊಂಡಿದ್ದು, ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನುಮತ್ತೊಂದು ಬೋಟ್‌ನಲ್ಲಿ ರಕ್ಷಿಸಲಾಗಿದೆ.
ಬೋಟಿನ ತಂಡೇಲ ದೇವೇಂದ್ರ ಮಂಜು ಮೊಗೇರ, ಕಲಾಸಿಗಳಾದ ಧನಂಜಯ ಮೊಗೇರ, ಸುಧೀರ್ ಕೃಷ್ಣ ಆಚಾರಿ, ನರಸಿಂಹ ಗೋವಿಂದ ಮೊಗೇರ, ನವೀನ್ ಗೊಂಡ, ನಾಗಪ್ಪ ಮೊಗೇರ, ಅನಿಲ್ ಬಾರೋ ಅವರು ಕೊಡವೂರಿನ ಸವಿತಾ ಎಸ್. ಸಾಲ್ಯಾನ್‌ಗೆ ಸೇರಿದ ಶ್ರೀ ಕುಲಮಹಾಸ್ತ್ರಿ ಫಿಶರೀಸ್ ಬೋಟಿನಲ್ಲಿ ಸೆ. 5ರಂದು ಬೆಳಗ್ಗೆ ಸುಮಾರು 4 ಗಂಟೆಗೆ ಮಲ್ಪೆ ಬಂದರಿನಿಂದ ತೆರಳಿದ್ದರು.
ಬೈಂದೂರಿನಿಂದ ಸುಮಾರು 13 ನಾಟಿಕಲ್ ಮೈಲು ದೂರದಲ್ಲಿ ಒಂದು ಟ್ರಾಲ್ ಮುಗಿಸಿ 2ನೇ ಟ್ರಾಲ್ ಹಾಕಿ ಬಲೆಯನ್ನು ಎಳೆದುಕೊಳ್ಳುವಾಗ ಆಕಸ್ಮಿಕವಾಗಿ ಬೋಟಿನ ಫ್ಯಾನಿಗೆ ಬಲೆ ಬಿದ್ದು ಎಂಜಿನ್ ಸ್ಥಗಿತಗೊಂಡಿತು. ಬೋಟನ್ನು ಚಾಲನಾ ಸ್ಥಿತಿಗೆ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆ ವೇಳೆ ಸಮೀಪದಲ್ಲಿದ್ದ ಸಾಯಿ ಸಾಗರ ಬೋಟಿನವರು ಧಾವಿಸಿ ಬಂದು ಬಲೆಯನ್ನು ಬಿಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಬೋಟನ್ನು ಸಮೀಪದ ಭಟ್ಕಳ ತೆಂಗಿನಗುಂಡಿ ಬಂದರಿಗೆ ಹಗ್ಗದ ಸಹಾಯದಿಂದ ಎಳೆದುಕೊಂಡು ತರುತ್ತಿದ್ದಾಗ ಬಂದರು ಬಳಿಯ ಅಳಿವೆಯಲ್ಲಿ ಸಂಜೆ 6 ಗಂಟೆ ವೇಳೆಗೆ ಹಗ್ಗ ತುಂಡಾಗಿ ಬೋಟು ನಿಯಂತ್ರಣ ತಪ್ಪಿ ಕಲ್ಲಿಗೆ ಬಡಿದು ಸಂಪೂರ್ಣ ಜಖಂಗೊಂಡಿದ್ದು, ಸುಮಾರು 60 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.