ಬೆಂಗಳೂರು, ಮೇ 14: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದ ಜೈನ್ ಹೆರಿಟೇಜ್ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ದುಷ್ಕರ್ಮಿಗಳು ಮಧ್ಯರಾತ್ರಿ 12.20ರ ಸುಮಾರಿಗೆ ಬಾಂಬ್ ಮೇಲ್ ಕಳಿಸಿದ್ದು, ಬೆಳಗ್ಗೆ 7.30ಕ್ಕೆ ಶಾಲೆ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಶಾಲಾ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಶಾಲೆಯಲ್ಲಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಹುಸಿ ಬಾಂಬ್ ಇ-ಮೇಲ್ ಎಂದು ದೃಢವಾಗಿದೆ.
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿದ್ದವು. ಈ ಬಾಂಬ್ ಬೆದರಿಕೆ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇಲಿಂದ ಮೇಲೆ ಈ ರೀತಿಯಾದ ಬಾಂಬ್ ಬೆದರಿಕೆ ಇ-ಮೇಲ್ಗಳು ಬರುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ