ಕಾರ್ಕಳ: ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿ ಹಾಗೂ ಪರಶುರಾಮನ ಕಂಚಿನ ಪ್ರತಿಮೆ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿ ಮತ್ತು ಪ್ರತಿಮೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅವುಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು.
ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿದ ಮಾರ್ಗದರ್ಶನದಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಕಾರ್ಕಳ ಕಾಂಗ್ರೆಸ್ ತಿಳಿಸಿದೆ.
ಪ್ರತಿಮೆ ಪುನರ್ ನಿರ್ಮಾಣದ ಕುರಿತು ತಾಂತ್ರಿಕ ಪರಿಣಿತರ ಸಲಹೆ ಪಡೆಯುವುದು, ಥೀಮ್ ಪಾರ್ಕ್‌ಗೆ ಸಂಬಂಧಿಸಿದ ಗೋಮಾಳ ಜಮೀನನ್ನು ಪಾರ್ಕ್ ಹೆಸರಿಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಕಾಮಗಾರಿಯನ್ನು ಪಾರದರ್ಶಕವಾಗಿ ನಡೆಸಲು ಹೊಸದಾಗಿ ಟೆಂಡರ್ ಕರೆಯುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರದ ಕ್ರಮಕ್ಕೆ ಕಾರ್ಕಳ ಕಾಂಗ್ರೆಸ್ ಸ್ವಾಗತ
ಕಳೆದ ಮೂರು ವರ್ಷಗಳಿಂದ ಪರಶುರಾಮ ಪ್ರತಿಮೆ ವಿಚಾರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಸರ್ಕಾರದ ಈ ನಿರ್ಧಾರದಿಂದ ಮತ್ತೊಂದು ಹಂತದ ಜಯ ಸಿಕ್ಕಂತಾಗಿದೆ. ಸರ್ಕಾರದ ಕ್ರಮವನ್ನು ಕಾರ್ಕಳ ಕಾಂಗ್ರೆಸ್ ಸ್ವಾಗತಿಸಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ.
ಶಾಸಕರ ವಾಹನ ಜಾಥಾ ಆಯೋಜನೆಗೆ ಟೀಕೆ
ಇದೇ ಸಂದರ್ಭದಲ್ಲಿ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಕಾರ್ಕಳಕ್ಕೆ ವಾಹನ ಜಾಥಾ ನಡೆಸುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಕ್ಕೆ ಕಾರ್ಕಳ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರ ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಂಡಿರುವಾಗ ವಾಹನ ಜಾಥಾ ಆಯೋಜಿಸುವುದು ರಾಜಕೀಯ ಪ್ರಚಾರದ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಯಾವುದೇ ಅಡ್ಡಿಪಡಿಸದೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯಲು ಶಾಸಕರು ಹಾಗೂ ಅವರ ಬೆಂಬಲಿಗರು ಸಹಕರಿಸಬೇಕು ಎಂದು ಕಾರ್ಕಳ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.
ಈ ಕುರಿತು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ಅಧ್ಯಕ್ಷ ಶುಭದರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಕಳ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್ ಎನ್.ಆರ್. ಮತ್ತು ಪ್ರತಿಮಾ ರಾಣೆ, ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ ಹಾಗೂ ಕೆಎಂಎಫ್ ಮಂಗಳೂರು ನಿರ್ದೇಶಕ ಸುಧಾಕರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






