ಮಂಗಳೂರು: ಮಾದಕ ವಸ್ತು MDMA ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ₹7,07,200 ಮೌಲ್ಯದ 70.72 ಗ್ರಾಂ MDMA ಮಾದಕ ವಸ್ತುವನ್ನು ವಶಪಡಿಸಿಕೊಂಡ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.
ಅಕ್ಟೋಬರ್ 27ರಂದು ರಾತ್ರಿ ಮಂಗಳೂರು ನಗರದ ಅತ್ತಾವರದಲ್ಲಿರುವ ಡಿ-ಮಾರ್ಟ್ ಸಮೀಪದ ಖಾಲಿ ಜಾಗದಲ್ಲಿ ಬಿಳಿ ಬಣ್ಣದ ಮಾರುತಿ ಸುಜುಕಿ ಸಿಯಾಝ್ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು MDMA ಮಾರಾಟ ಮಾಡಲು ಬಂದಿರುವ ಬಗ್ಗೆ ಸಿಸಿಬಿ ಘಟಕದ ಪಿಎಸ್‌ಐ ಸುದೀಪ್ ಎಂ.ವಿ. ಅವರಿಗೆ ಖಚಿತ ಮಾಹಿತಿ ಲಭಿಸಿತ್ತು.ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ರಾತ್ರಿ 11.25ರ ಸುಮಾರಿಗೆ ದಾಳಿ ನಡೆಸಿ ಕಾರಿನಲ್ಲಿದ್ದ ಅಬ್ದುಲ್ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್ ಹಾಗೂ ಬದ್ರುದ್ದೀನ್ ಅಲಿಯಾಸ್ ಅದ್ದು ಎಂಬವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಈ ವೇಳೆ ಆರೋಪಿಗಳ ವಶದಲ್ಲಿದ್ದ ಒಟ್ಟು 70.72 ಗ್ರಾಂ ತೂಕದ MDMA ಮಾದಕ ವಸ್ತು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹7,07,200 ಎಂದು ತಿಳಿದುಬಂದಿದೆ.
ಅಲ್ಲದೆ, ₹30,000 ಅಂದಾಜು ಮೌಲ್ಯದ ಮೂರು ಸ್ಮಾರ್ಟ್‌ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹4 ಲಕ್ಷ ಮೌಲ್ಯದ ಮಾರುತಿ ಸುಜುಕಿ ಸಿಯಾಝ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟು ₹11,37,200 ಮೌಲ್ಯದ ಮಾದಕ ವಸ್ತು, ಮೊಬೈಲ್ ಫೋನ್‌ಗಳು ಹಾಗೂ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







