ಕಾರ್ಕಳ : ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ರಾಜ್ಯದ ಜನರ ಜನಮನ ಗೆದ್ದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಿ ಕಾರ್ಕಳದಲ್ಲಿ ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರುಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವಿರುದ್ದ ಜನ ಜಾಗೃತಿಗಾಗಿ ಮತ್ತು ಕಾರ್ಕಳದ ಜನತೆಗೆ ಸತ್ಯ ದರ್ಶನದ ದೃಷ್ಟಿಯಿಂದ ಕಾರ್ಕಳ ಕಾಂಗ್ರೆಸ್ ಸಮಿತಿಯು ಅಕ್ಟೋಬರ್ 08 ಗುರುವಾರದಂದು “ಸತ್ಯಮೇವ ಜಯತೆ” ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆಯು ನಡೆಯಿತು.
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡಿರುವ ರಾಜ್ಯ ಸರ್ಕಾರವು ತುಳುನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿದ್ದು ಮಂಗಳೂರಿನಲ್ಲಿಯೇ ನಡೆದ ಸಚಿವ ಸಂಪುಟದ ಸಭೆಯ ಯಶಸ್ವಿಯಾಗಿದ್ದು ಈ ಎಲ್ಲಾ ಬೆಳವಣಿಗೆಯಿಂದ ವಿಚಲಿತರಾದ ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರದ ವಿರುದ್ದ ಸುಳ್ಳು ಆರೋಪಗಳನ್ನು ನಡೆಸಲು ಪ್ರತಿಭಟನಾ ಸಭೆಯನ್ನು ನಡೆಸಿರುವುದು ಖಂಡನೀಯ, ಸೋಲಿನ ಭೀತಿಯಿಂದ ಸ್ಥಿಮಿತ ಕಳೆದುಕೊಂಡಿರುವ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ವಿರುದ್ದ ಅವಾಚ್ಯವಾಗಿ ನಿಂದಿಸುವ ಭಾಷಣ ಮಾಡಿರುವುದರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಿತರಾಗಿದ್ದು ಕಾರ್ಕಳದ ಜನತೆಗೆ ಸತ್ಯಾಂಶವನ್ನು ತಿಳಿಸುವ ನಿಟ್ಟಿನಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮ ನಡೆಸುವುದಾಗಿ ಸರ್ವಾನುಮತದಿಂದ ಘೋಷಣೆ ಮಾಡಲಾಯಿತು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್, ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ, ರವಿಶಂಕರ್ ಶೇರಿಗಾರ್, ಉಭಯ ಬ್ಲಾಕ್,ಗಳ ಪ್ರಚಾರ ಸಮಿತಿ ಅಧ್ಯಕ್ಷರುಗಳಾದ ನವೀನ್ ಅಡ್ಯಂತಾಯ ಹಾಗು ಅನಿಲ್ ಪೂಜಾರಿ ಮಾಳ, ಗ್ಯಾರಂಟಿ ಸಮಿತಿ ಅದ್ಯಕ್ಷ ಅಜಿತ್ ಹೆಗ್ಡೆ ಮಾಳ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ಭಾನು ಬಾಸ್ಕರ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಶ್ರೀಮತಿ ಪ್ರತಿಮಾ ರಾಣೆ, ಮಾಜಿ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಯುವ ಕಾಂಗ್ರೆಸ್ ವಿಧಾನಸಭಾ ಅದ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಮಲಿಕ್ ಅತ್ತೂರು, ನಗರ ಅಧ್ಯಕ್ಷ ರಾಜೇಂದ್ರ ದೇವಾಡಿಗ , ಹಿರ್ಗಾನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ ಹಾಗೂ ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರು, ವಿವಿಧ ಬ್ಲಾಕ್ ಪದಾಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.






