ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ವಿಶ್ವವಿದ್ಯಾಲಯದಾದ್ಯಂತ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಗೂಗಲ್ ಇಂಡಿಯಾದೊಂದಿಗೆ ಸಹಭಾಗಿತ್ವದ ಒಪ್ಪಂದ [ಎಂಒಯು]ಕ್ಕೆ ಸೆಪ್ಟೆಂಬರ್ 26, 2026 ರಂದು ಸಹಿ ಹಾಕಲಾಗಿದೆ. ಈ ಒಪ್ಪಂದದಲ್ಲಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಗೂಗಲ್‌ನ ಪರಿಣತಿ, ಸುಧಾರಿತ ತಂತ್ರಜ್ಞಾನ ಹಾಗೂ ಎಐ ಸಾಮರ್ಥ್ಯಗಳನ್ನು ಬಳಸಿಕೊಂಡು ಪ್ರಮುಖ ಕ್ಷೇತ್ರಗಳಲ್ಲಿ ಎಐಯ ಅನ್ವಯಗಳನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಹೊಣೆಯನ್ನು ಮಾಹೆ ವಹಿಸಲಿದೆ.
ಈ ಸಹಭಾಗಿತ್ವವು ಮಾಹೆಯ ಮ್ಯಾಜಿಕ್ (ಮಾಹೆ ಏಜೆಂಟಿಕ್ ಇಂಟಲಿಜೆನ್ಸ್ ಕನ್ಸೋಲ್] ಉಪಕ್ರಮದ ಭಾಗವಾಗಿದ್ದು, ಇದರ ಮೂಲಕ ವಿಶ್ವವಿದ್ಯಾಲಯವು ಪೂರ್ಣಪ್ರಮಾಣದ ಎಐ-ಏಜೆಂಟಿಕ್ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಉಪಕ್ರಮದಡಿ, ಮಾಹೆಯು ಎಐ ಆಧಾರಿತ ನಾವೀನ್ಯ, ಸಂಶೋಧನೆ, ಶಿಕ್ಷಣ ಹಾಗೂ ಸಂಸ್ಥೆಯ ವಿವಿಧ ಅನ್ವಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಲಿದೆ.
ಈ ಸಹಯೋಗದ ಭಾಗವಾಗಿ, ಗೂಗಲ್ ತಂತ್ರಜ್ಞಾನ ಆಧಾರಿತ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸುವ ನಿಟ್ಟಿನಲ್ಲಿ ಮಾಹೆ ಕಾರ್ಯಪ್ರವೃತ್ತವಾಗಲಿದೆ. ಜೊತೆಗೆ, ಜೆಮಿನಿ ಸೇರಿದಂತೆ ಗೂಗಲ್‌ನ ವಿವಿಧ ಸಾಧನಗಳನ್ನು ಬಳಸಿಕೊಂಡು ಎಐ ಆಧಾರಿತ ಆರೋಗ್ಯ ಸಂಶೋಧನೆಯ ಸಾಧ್ಯತೆಗಳನ್ನು ಅನ್ವೇಷಿಸುವುದಕ್ಕೆ ಹಾಗೂ ಎಐ ಆಧಾರಿತ ಬೋಧನೆ ಮತ್ತು ಕಲಿಕೆಯನ್ನು ಬಲಪಡಿಸಲು ಶೈಕ್ಷಣಿಕ ಪರಿಕ್ರಮಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಪ್ರಾಶಸ್ತ್ಚ ಸಿಗಲಿದೆ. ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಎಐಯ ಅನ್ವಯ ಸಾಧ್ಯತೆಗಳನ್ನು ವಿಸ್ತರಿಸಲು, ಶಿಕ್ಷಣದ ಹೊಸ ಸಾಧ್ಯತೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಈ ಸಹಭಾಗಿತ್ವ ಮುಕ್ತ ಅವಕಾಶವನ್ನು ಒದಗಿಸಲಿದೆ.
ಮಾಹೆ- ಗೂಗಲ್ ಇಂಡಿಯ ಸಹಭಾಗಿತ್ವದ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಕೆ. ಶರತ್ ರಾವ್ ಅವರು, ‘ಕೃತಕ ಬುದ್ಧಿಮತ್ತೆಯು ವಿಶ್ವವಿದ್ಯಾಲಯಗಳು ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಸೇವೆಯನ್ನು ನೋಡುವ ರೀತಿಯನ್ನೇ ಬದಲಾಯಿಸುತ್ತಿದೆ. ಮಾಹೆಯು ‘ಮ್ಯಾಜಿಕ್ ’ ಮೂಲಕ, ಶೈಕ್ಷಣಿಕ ಹಾಗೂ ಸಾಂಸ್ಥಿಕ ಪ್ರಕ್ರಿಯೆಗಳಲ್ಲಿ ಏಜೆಂಟಿಕ್ ಎಐಯನ್ನು ಸಂಯೋಜಿಸುವ ಅವಕಾಶವನ್ನು ಹೊಂದುತ್ತಿದೆ. ಈ ಪ್ರಯತ್ನಕ್ಕೆ ಜಾಗತಿಕ ಪರಿಣತಿ ಮತ್ತು ಅತ್ಯಾಧುನಿಕ ಎಐ ಸಾಮರ್ಥ್ಯಗಳನ್ನು ಒದಗಿಸುವಲ್ಲಿ ಗೂಗಲ್ ಇಂಡಿಯಾದೊಂದಿಗಿನ ಮಾಹೆಯ ಸಹಭಾಗಿತ್ವ ಪೂರಕವಾಗಲಿದೆ. ವಿಶೇಷವಾಗಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದ ಮೇಲೆ ಗಮನಹರಿಸಿ, ಕಲಿಕೆ, ಸಂಶೋಧನೆ ಹಾಗೂ ಆರೋಗ್ಯ ಸೇವೆಯ ಫಲಿತಾಂಶಗಳನ್ನು ಸುಧಾರಿಸುವ ಅರ್ಥಪೂರ್ಣ ಅನ್ವಯ ಸಾಧ್ಯತೆಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಹೆಯ ಕುಲಸಚಿವರಾದ ಡಾ. ಗಿರಿಧರ ಕಿಣಿ, ಆರೋಗ್ಯ ವಿಜ್ಞಾನ ವಿಭಾಗದ ಸಹ-ಕುಲಪತಿಗಳಾದ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ಮಾಹೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ [ಸಿಒಒ] ಡಾ. ಆನಂದ್ ವೇಣುಗೋಪಾಲ್, ಮಾಹೆಯ ಐಟಿ ಮತ್ತು ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ವಿಭಾಗದ ನಿರ್ದೇಶಕ ಡಾ. ಗಣೇಶ್ ಪ್ರಸಾದ್, ಹಾಗೂ ಇಂಡಸ್ಟ್ರಿ ಆಯಂಡ್ ಅಕಡೆಮಿಯಾ ಕೊಲಾಬರೇಶನ್ ವಿಭಾಗದ ನಿರ್ದೇಶಕ ಡಾ. ಹರೀಶ್ ಕುಮಾರ್ ಅವರು ಉಪಸ್ಥಿತರಿದ್ದರು.
ಗೂಗಲ್ ಇಂಡಿಯಾದ ಪರವಾಗಿ ಭಾರತ ಮತ್ತು ಎಸ್‌ಎಎಆರ್‌ಸಿ [ಸಾರ್ಕ್]ಯ ಗೂಗಲ್ ಎಜುಕೇಶನ್ ಮತ್ತು ಎಡ್‌ಟೆಕ್ ಲೀಡರ್ ವೈಭವ್ ಕುಮಾರ್ ಶ್ರೀವಾಸ್ತವ, ಗೂಗಲ್ ಇಂಡಿಯಾದ ಅಲಯನ್ಸ್, ಪಾರ್ಟ್ನರ್‌ಶಿಪ್ಸ್, ಪಬ್ಲಿಕ್ ಸೆಕ್ಟರ್ ಮತ್ತು ಎಜುಕೇಶನ್ ವಿಭಾಗದ ಮುಖ್ಯಸ್ಥ ಅಮ್ರೀಶ್ ಕೊಹ್ಲಿ, ಗೂಗಲ್ ಇಂಡಿಯಾದ ದಕ್ಷಿಣ ಮತ್ತು ಪಶ್ಚಿಮ ವಲಯದ ಗೂಗಲ್ ಫಾರ್ ಎಜುಕೇಶನ್‌ನ ಪ್ರಾದೇಶಿಕ ಮುಖ್ಯಸ್ಥೆ ನವಿಷಾ ಪ್ರಭಾಕರ್ ಹಾಗೂ ಗೂಗಲ್ ಇಂಡಿಯಾದ ಗೂಗಲ್ ಫಾರ್ ಎಜುಕೇಶನ್ ವಿಭಾಗದ ಕಸ್ಟಮರ್ ಎಂಜಿನಿಯರ್ ಪ್ರತೀಕ್ಷಾ ಆನಂದ್ ಉಪಸ್ಥಿತರಿದ್ದರು.







