ಭಾರತ : ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ದೇಶಗಳ ಮೇಲೆ ಶೇ. 100 ರಷ್ಟು ಸುಂಕವನ್ನು ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ವ್ಯಾಪಕ ಅಧಿಕಾರವನ್ನು ನೀಡುವ ಹೊಸ ʼಯುಎಸ್ ನಿರ್ಬಂಧಗಳ ಕಾಯಿದೆ’ಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ವ್ಯಾಪಾರವನ್ನು ಅಸ್ತ್ರವನ್ನಾಗಿಸಿಕೊಳ್ಳುವ ಮೂಲಕ, ಯಾರು ಯಾರಿಂದ ತೈಲವನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ತನ್ನದಾಗಿಸಿಕೊಳ್ಳಲು ಯುಎಸ್ ಪ್ರಯತ್ನಿಸುತ್ತಿದೆ. ಇತರ ದೇಶಗಳ ವಿದೇಶಾಂಗ ಮತ್ತು ಆರ್ಥಿಕ ನೀತಿಗಳನ್ನು ನಿರ್ದೇಶಿಸುವ ಈ ಕಾನೂನು, ಆ ದೇಶಗಳ ಸಾರ್ವಭೌಮತ್ವ ಮತ್ತು ಘನತೆಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪೊಲಿಟ್‌ಬ್ಯುರೊ ಹೇಳಿದೆ.
ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲೆ ಭಾರೀ ಪ್ರಮಾಣದಲ್ಲಿ ಅವಲಂಬಿತವಾಗಿರುವ ಭಾರತವು, ರಷ್ಯಾದಿಂದ ಗಣನೀಯ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮಕ್ಕೆ ಗುರಿಯಾಗಬಹುದಾದ ದೇಶಗಳಲ್ಲಿ ಒಂದಾಗಿದೆ. ಜುಲೈ 2026 ರಲ್ಲಿ ಭಾರತದ ಒಟ್ಟು ಆಮದಿನಲ್ಲಿ ರಷ್ಯಾದ ಪಾಲು ಶೇ. 51 ಕ್ಕಿಂತ ಹೆಚ್ಚಿತ್ತು. ತೈಲ ಪೂರೈಕೆಯಲ್ಲಿ ಉಂಟಾಗುವ ಯಾವುದೇ ಬಲವಂತದ ವ್ಯತ್ಯಯ ಅಥವಾ ದುಬಾರಿ ಮರುಹೊಂದಾಣಿಕೆಯು ಇಂಧನ ಬೆಲೆಗಳ ಏರಿಕೆಗೆ ಕಾರಣವಾಗಬಹುದು; ಇದು ಹಣದುಬ್ಬರ, ಬೆಲೆ ಏರಿಕೆ ಮತ್ತು ಸಾಮಾನ್ಯ ಜನರ ಜೀವನೋಪಾಯಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಇರಾನ್‌ನಿಂದ ನಡೆಯುತ್ತಿದ್ದ ಆಮದು ಈಗಾಗಲೇ ಸ್ಥಗಿತಗೊಂಡಿದೆ.
ಮೋದಿ ಸರ್ಕಾರವು ಯುಎಸ್ ನ್ನು ಸಾಮರಿಕ ಪಾಲುದಾರ ಎಂದು ಪರಿಗಣಿಸುವುದನ್ನು ಮತ್ತು ಯುಎಸ್ ಸಾಮ್ರಾಜ್ಯಶಾಹಿಯ ಬೆದರಿಕೆ ತಂತ್ರಗಳಿಗೆ ಮಣಿಯುವುದನ್ನು ನಿಲ್ಲಿಸಬೇಕು. ಜಿ-20 ವ್ಯಾಪಾರ ಸಚಿವರ ಸಭೆಯಲ್ಲಿ ಭಾಗವಹಿಸಲು ಯುಎಸ್‌ಗೆ ಭೇಟಿ ನೀಡಲಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭಾರತದ ನಿಲುವನ್ನು ಶಕ್ತಿಯುತವಾಗಿ ಮಂಡಿಸಬೇಕು ಮತ್ತು ಈ ಕಾನೂನನ್ನು ರದ್ದುಗೊಳಿಸುವಂತೆ ಆಗ್ರಹಿಸಬೇಕು. ನಮ್ಮ ಆರ್ಥಿಕ ಮತ್ತು ವಿದೇಶಾಂಗ ನೀತಿಯ ಆಯ್ಕೆಗಳನ್ನು ಯುಎಸ್ ನಿರ್ದೇಶಿಸಲು ನಾವು ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ಹೇಳಿದೆ.






