ಬಾರಕೂರು, ಸೆಪ್ಟೆಂಬರ್ 1: ಸುಜ್ಞಾನ ನ್ಯಾಷನಲ್ ಪದವಿ ಪೂರ್ವ ಕಾಲೇಜು, ಬಾರಕೂರು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಓಣಂ ಆಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
“ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಗಮ” ಎಂಬ ಆಶಯದೊಂದಿಗೆ ಆಯೋಜಿಸಲಾದ ಕಾರ್ಯಕ್ರಮವು ಕೇರಳದ ಸಾಂಪ್ರದಾಯಿಕ ಸಂಸ್ಕೃತಿ ಹಾಗೂ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಅನಾವರಣಗೊಳಿಸಿತು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.
ಸುಂದರವಾಗಿ ಅಲಂಕರಿಸಲಾದ ಹೂವಿನ ರಂಗೋಲಿಯ ಮೇಲೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, “ಹಬ್ಬಗಳು ಕೇವಲ ಸಂಭ್ರಮದ ಕ್ಷಣಗಳಲ್ಲ; ಅವು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸೌಹಾರ್ದವನ್ನು ಬೆಸೆಯುವ ಸೇತುವೆಗಳಾಗಿವೆ” ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಓಣಂ ಹಬ್ಬದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕೋಶಾಧಿಕಾರಿ ಶ್ರೀ ಭರತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಆಚರಣೆಗಳು ಮತ್ತು ಸಂಸ್ಕೃತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಅವುಗಳ ಮೌಲ್ಯಗಳನ್ನು ಜೀವನದುದ್ದಕ್ಕೂ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಆಚಾರ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಮ್ಮ ನಾಡಿನ ವಿವಿಧ ಸಂಪ್ರದಾಯಗಳ ಬಗ್ಗೆ ಅರಿವು ಹಾಗೂ ಗೌರವವನ್ನು ಬೆಳೆಸುತ್ತವೆ ಎಂದು ಹೇಳಿದರು.
ಓಣಂ ಹಬ್ಬದ ಹಿನ್ನೆಲೆ, ಅದರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಮತ್ತು ಭಾರತೀಯ ಸಂಸ್ಕೃತಿಯ ವೈವಿಧ್ಯತೆಯ ಕುರಿತು ವಿದ್ಯಾರ್ಥಿಗಳಾದ ವಿಗ್ನೇಶ್ ಹಾಗೂ ನಿರೀಕ್ಷಾ ಅರ್ಥಪೂರ್ಣವಾಗಿ ಮಾತನಾಡಿದರು. ಭರತನಾಟ್ಯ ಹಾಗೂ ಚಂಡೆ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಉಪನ್ಯಾಸಕ ವೃಂದದವರ ಕೇರಳ ಶೈಲಿಯ ಸಾಂಪ್ರದಾಯಿಕ ಉಡುಗೆ ಹಾಗೂ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಪ್ರದಾಯಿಕ ಉಡುಗೆ–ತೊಡುಗೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಪ್ರಥಮ ಪಿಯುಸಿ ವಿದ್ಯಾರ್ಥಿ ಸುಚಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವು ಸಂಸ್ಕೃತಿ, ಸಂಪ್ರದಾಯ, ಸೌಹಾರ್ದತೆ ಮತ್ತು ಸಂಭ್ರಮದ ಸುಂದರ ಸಂಗಮವಾಗಿ ಮೂಡಿಬಂತು.
“ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿದ್ದಾಗಲೇ, ಭವಿಷ್ಯದ ಪೀಳಿಗೆಯ ಹೆಜ್ಜೆಗಳು ದೃಢವಾಗುತ್ತವೆ.”






