ಮಣಿಪಾಲ, ಜುಲೈ 03, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ [ಎಂಸಿಓಎನ್-ಎಂಕಾನ್] ಡೀನ್ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಅವರು ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್‌ನ (ಎಎಎನ್) 2026ನೇ ಸಾಲಿನ ಪ್ರತಿಷ್ಠಿತ ‘ಫೆಲೋ’ ಆಗಿ ಆಯ್ಕೆಯಾಗಿದ್ದಾರೆ.
ಶಿಕ್ಷಣ, ಸಂಶೋಧನೆ, ನಾವೀನ್ಯ ಹಾಗೂ ನಾಯಕತ್ವದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜಾಗತಿಕ ನರ್ಸಿಂಗ್ ಸಾಧಕರನ್ನು ಗುರುತಿಸಿ ‘ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್’ (ಎಎಎನ್) ಜೂನ್ 25ರಂದು ತನ್ನ 2026ನೇ ಸಾಲಿನ ಫೆಲೋಗಳನ್ನು ಪ್ರಕಟಿಸಿದೆ. ನರ್ಸಿಂಗ್ ವೃತ್ತಿಯ ಅತ್ಯುನ್ನತ ಗೌರವವೆಂದೇ ಹೆಸರಾದ ಈ ‘ಎಎಎನ್ ಫೆಲೋಶಿಪ್’, ಜಾಗತಿಕ ಆರೋಗ್ಯ ರಕ್ಷಣಾ ವಲಯದಲ್ಲಿ ಶಾಶ್ವತ ಛಾಪು ಮೂಡಿಸಿದ ಗಣ್ಯರಿಗೆ ನೀಡುವ ಪ್ರತಿಷ್ಠಿತ ಮನ್ನಣೆಯಾಗಿದೆ.
2026ನೇ ಸಾಲಿನ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಅಮೆರಿಕದ 39 ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಹಾಗೂ 17 ದೇಶಗಳ ಪ್ರಖ್ಯಾತ ನರ್ಸಿಂಗ್ ನಾಯಕರು ಸ್ಥಾನ ಪಡೆದಿದ್ದಾರೆ. ಜ್ಞಾನ, ನೀತಿ ಮತ್ತು ನಾವೀನ್ಯದ ಮೂಲಕ ಆರೋಗ್ಯ ಕ್ಷೇತ್ರವನ್ನು ಪರಿವರ್ತಿಸುತ್ತಿರುವ ಪ್ರಭಾವಶಾಲಿ ವೃತ್ತಿಪರ ಸಮುದಾಯ ಇದಾಗಿದೆ. ಡಾ. ನೊರೊನ್ಹಾ ಅವರ ಈ ಆಯ್ಕೆಯು, ಜಾಗತಿಕ ನರ್ಸಿಂಗ್ ಸಾಧಕರ ಶ್ರೇಷ್ಠ ಅಂತಾರಾಷ್ಟ್ರೀಯ ಕೂಟದಲ್ಲಿ ಅವರಿಗೆ ಗೌರವಾನ್ವಿತ ಸ್ಥಾನವನ್ನು ತಂದುಕೊಟ್ಟಿದೆ.
ಡಾ. ನೊರೊನ್ಹಾ ಅವರ ಈ ಮಹತ್ವದ ಸಾಧನೆಯನ್ನು ಅಭಿನಂದಿಸಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ʼಡಾ. ಜುಡಿತ್ ಏಂಜಲಿಟ್ಟಾ ನೊರೊನ್ಹಾ ಅವರು ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್‌ನ ಫೆಲೋ ಆಗಿ ಆಯ್ಕೆಯಾಗಿರುವುದು ಮಾಹೆ ಮತ್ತು ಒಟ್ಟಾರೆ ಭಾರತೀಯ ನರ್ಸಿಂಗ್ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮನ್ನಣೆಯು, ಹಲವು ದಶಕಗಳಿಂದ ಡಾ. ನೊರೊನ್ಹಾ ಅವರು ನರ್ಸಿಂಗ್ ಶಿಕ್ಷಣ, ಸಂಶೋಧನೆ ಮತ್ತು ನಾಯಕತ್ವಕ್ಕೆ ನೀಡಿದ ಕೊಡುಗೆಗಳಿಗೆ ಸಂದ ಮನ್ನಣೆಯಾಗಿದೆʼ ಎಂದು ಸಂತಸ ವ್ಯಕ್ತಪಡಿಸಿದರು.
‘ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್‌ನ ಫೆಲೋ ಆಗಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇದು ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ; ನನ್ನ ವೃತ್ತಿ ಹಾಗೂ ಶೈಕ್ಷಣಿಕ ಪಯಣದಲ್ಲಿ ಬೆಂಬಲವಾಗಿ ನಿಂತ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರ ಒಗ್ಗಟ್ಟಿನ ಶ್ರಮಕ್ಕೆ ಸಂದ ಜಯ’ ಎಂದು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಡೀನ್ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
2026ನೇ ಸಾಲಿನ ಫೆಲೋಗಳ ಅಧಿಕೃತ ಸೇರ್ಪಡೆ ಕಾರ್ಯಕ್ರಮವು ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಕ್ಟೋಬರ್ 8 ರಿಂದ 10ರವರೆಗೆ ನಡೆಯಲಿರುವ ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್‌ನ ‘ಹೆಲ್ತ್ ಪಾಲಿಸಿ ಕಾನ್ಫರೆನ್ಸ್’ (ಆರೋಗ್ಯ ನೀತಿ ಸಮ್ಮೇಳನ) ವೇಳೆ ಜರುಗಲಿದ್ದು, ಸಮ್ಮೇಳನದ ಕೊನೆಯ ದಿನದಂದು ಪದಗ್ರಹಣ ಸಮಾರಂಭ ನೆರವೇರಲಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ, ನಿರ್ವಹಣೆ, ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಮಾಹೆ ನೀಡುತ್ತಿದೆ. ಮಣಿಪಾಲ, ಮಂಗಳೂರು, ಬೆಂಗಳೂರು, ಜಂಶೆಡ್ಪುರ ಹಾಗೂ ದುಬೈ ಕ್ಯಾಂಪಸ್‌ಗಳ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹೆ ವಿಶಿಷ್ಟ ಗುರುತನ್ನು ಸಂಪಾದಿಸಿದೆ. 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆಯನ್ನು ನೀಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) 2025ರ ಶ್ರೇಯಾಂಕದಲ್ಲಿ ದೇಶದಲ್ಲಿ 3ನೇ ಸ್ಥಾನ ಪಡೆದಿರುವ ಮಾಹೆ, ಗುಣಮಟ್ಟದ ಶಿಕ್ಷಣ, ಸಮೃದ್ಧ ಕ್ಯಾಂಪಸ್ ಜೀವನ ಮತ್ತು ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಹುಡುಕುವ ವಿದ್ಯಾರ್ಥಿಗಳ ಆದ್ಯತೆಯ ತಾಣವಾಗಿದೆ.







