• ಇಂದಿನ ಜಗತ್ತಿನ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಮುಂಚೂಣಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಡೊಮೈನ್ ಮತ್ತು ಅಪ್ಲಿಕೇಶನ್ ಜ್ಞಾನದೊಂದಿಗೆ ಒಟ್ಟುಗೂಡಿಸುತ್ತಿರುವ ವಿಶಿಷ್ಟ ಕಾರ್ಯಕ್ರಮ ಎಬಿಬಿ ಆಕ್ಸಿಲರೇಟರ್.
• ಈ ಮಹತ್ವದ ಯೋಜನೆಗಾಗಿ ಎಬಿಬಿ ಹಾಗೂ ಅದರ ಪಾಲುದಾರ ಸಂಸ್ಥೆಗಳ 1000ಕ್ಕೂ ಹೆಚ್ಚು ತಂತ್ರಜ್ಞರು, 25ಕ್ಕೂ ಹೆಚ್ಚು ಪ್ರಮುಖ ಉದ್ಯಮ ಮತ್ತು ಶೈಕ್ಷಣಿಕ ಚಿಂತಕರು, 80 ಸ್ಟಾರ್ಟ್ ಅಪ್ ಗಳು ಹಾಗೂ 350ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಒಟ್ಟಾಗಿ ಕೈಜೋಡಿಸಿವೆ.

ಬೆಂಗಳೂರು, ಭಾರತ, ಜುಲೈ 01, 2026: ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್ (ಎಐಸಿ) ಆವರಣದಲ್ಲಿ ಐದು ದಿನಗಳ ಕಾಲ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದ ಆರನೇ ಆವೃತ್ತಿಯು ಯಶಸ್ವಿಯಾಗಿ ಸಮಾರೋಪಗೊಂಡಿದೆ. ಈ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಗತ್ತಿನ ಅತ್ಯುತ್ತಮ ಪ್ರತಿಭೆಗಳ ನಡುವಿನ ಸಹಯೋಗವು ಹೇಗೆ ಹೊಸ ಉತ್ಪನ್ನಗಳು ಮತ್ತು ಪರಿಹಾರಗಳ ಅಭಿವೃದ್ಧಿಯನ್ನು ಚುರುಕುಗೊಳಿಸುತ್ತದೆ ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಕೈಗಾರಿಕಾ ರೂಪಾಂತರಕ್ಕೆ ಅಗತ್ಯವಿರುವ ಭವಿಷ್ಯದ ಸನ್ನದ್ಧ ಪ್ರತಿಭೆಗಳನ್ನು ಬಲಪಡಿಸುವತ್ತಲೂ ಈ ಕಾರ್ಯಕ್ರಮವು ಬೆಳಕು ಚೆಲ್ಲಿದ್ದು, ಜಗತ್ತನ್ನು ಹೆಚ್ಚು ಸುರಕ್ಷಿತ, ಹೆಚ್ಚು ಉತ್ಪಾದಕ ಮತ್ತು ಹೆಚ್ಚು ಸುಸ್ಥಿರವಾಗಿಸುವ ನಿಟ್ಟಿನಲ್ಲಿ ಉದ್ಯಮಗಳು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವ ಪ್ರಸಕ್ತ ಸಮಯದಲ್ಲಿ ಈ ಸಮಾವೇಶ ನಡೆದಿರುವುದು ಗಮನಾರ್ಹವಾಗಿದೆ.
ಈ ಕುರಿತು ಮಾತನಾಡಿದ ಎಬಿಬಿ ಇನ್ನೋವೇಶನ್ ಸೆಂಟರ್ ನ (ಎಐಸಿ) ಪೂರ್ಣಾವಧಿ ನಿರ್ದೇಶಕರಾದ ಜಿಎನ್‌ವಿ ಸುಬ್ಬಾರಾವ್ ಅವರು, “ಎಬಿಬಿ ಆಕ್ಸಿಲರೇಟರ್ ಎಂಬುದು ಜಾಗತಿಕ ಮಟ್ಟದ ಆವಿಷ್ಕಾರ ಕಾರ್ಯಕ್ರಮವಾಗಿದ್ದು, ಇಲ್ಲಿ ಕಲ್ಪನೆಗಳನ್ನು ನಮ್ಮ ಗ್ರಾಹಕರಿಗೆ ಉಪಯುಕ್ತವಾಗುವಂತಹ ಉತ್ತಮ ಪರಿಹಾರಗಳನ್ನಾಗಿ ಪರಿವರ್ತಿಸಲಾಗುತ್ತದೆ. ಇಲ್ಲಿ ಅಭಿವೃದ್ಧಿಪಡಿಸಲಾದ ಆವಿಷ್ಕಾರಗಳು ಕೇವಲ ಪ್ರಯೋಗಗಳಾಗಿ ಉಳಿಯದೆ, ಕೈಗಾರಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಅಭಿವೃದ್ಧಿಗೊಳಿಸಬಹುದಾದ ಉತ್ಪನ್ನಗಳು ಮತ್ತು ಪರಿಹಾರಗಳಾಗಿ ಮೂಡಿಬರುತ್ತವೆ. ಅತ್ಯಾಧುನಿಕ ಆರ್ ಅಂಡ್ ಡಿ, ಡೊಮೇನ್ ಮತ್ತು ಅಪ್ಲಿಕೇಶನ್ ಇಂಜಿನಿಯರಿಂಗ್ ಸಾಮರ್ಥ್ಯ ಹಾಗೂ ಡಿಜಿಟಲ್ ಮತ್ತು ಎಐ ತಂತ್ರಜ್ಞಾನಗಳನ್ನು ಒಟ್ಟುಗೂಡಿಸುವ ಮೂಲಕ, ನಾವು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತಿದ್ದೇವೆ. ಇದರೊಂದಿಗೆ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯಗಳನ್ನು ನಾವು ನಿರ್ಮಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್, ಸಂಸ್ಥೆಯ ಜಾಗತಿಕ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಅತಿ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. ಇದು ಆರ್ ಅಂಡ್ ಡಿ, ಇಂಜಿನಿಯರಿಂಗ್, ಡಿಜಿಟಲ್ ತಂತ್ರಜ್ಞಾನ ಹಾಗೂ ಜಾಗತಿಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಸುಮಾರು 4,000 ತಂತ್ರಜ್ಞರ ನೆಲೆಯಾಗಿದೆ. ಉತ್ಕೃಷ್ಟ ಡೊಮೈನ್ ಪರಿಣತಿಯನ್ನು ಎಐ, ಕ್ಲೌಡ್ ಮತ್ತು ಡಿಜಿಟಲ್ ಸಾಮರ್ಥ್ಯಗಳೊಂದಿಗೆ ಒಟ್ಟುಗೂಡಿಸುವ ಮೂಲಕ, ಎಐಸಿ ಮುಂದಿನ ಪೀಳಿಗೆಯ ಕೈಗಾರಿಕಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಉತ್ಪನ್ನಗಳ ಹೊಸತನವನ್ನು ಚುರುಕುಗೊಳಿಸುವುದರ ಜೊತೆಗೆ ಸ್ವಾಯತ್ತ ಕಾರ್ಯಾಚರಣೆಯ ಕಡೆಗೆ ಸಾಗುತ್ತಿರುವ ಗ್ರಾಹಕರಿಗೆ ಅಗತ್ಯ ಬೆಂಬಲವನ್ನು ನೀಡುತ್ತಿದೆ.
ಈ ಕುರಿತು ಮಾತನಾಡಿದ ಎಬಿಬಿ ಆಟೊಮೇಷನ್ ವಿಭಾಗದ ಗ್ಲೋಬಲ್ ಚೀಫ್ ಡಿಜಿಟಲ್ ಆಫೀಸರ್ ರಾಜೇಶ್ ರಾಮಚಂದ್ರನ್ ಅವರು, “ಎಬಿಬಿಯಲ್ಲಿ ನಾವು ಈ ಆಕ್ಸಿಲರೇಟರ್ ಅನ್ನು ಕೈಗಾರಿಕಾ ವಲಯದಲ್ಲಿ ಪರಿಣಾಮ ಬೀರುವ ಒಂದು ಶಕ್ತಿಶಾಲಿ ವೇದಿಕೆಯಾಗಿ ನೋಡುತ್ತೇವೆ. ಎಬಿಬಿ ತಜ್ಞರು, ಪಾಲುದಾರರು, ನವೋದ್ಯಮಗಳು, ಶೈಕ್ಷಣಿಕ ವಲಯ ಹಾಗೂ ಚಿಂತಕರನ್ನು ಒಂದೇ ಸೂರಿನಡಿ ತರುವ ಮೂಲಕ, ನಾವು ಕೈಗಾರಿಕಾ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಭಿವೃದ್ಧಿಪಡಿಸಬಹುದಾದ ಪರಿಹಾರಗಳ ಚಿಂತನೆ ಮತ್ತು ಅಭಿವೃದ್ಧಿಯನ್ನು ಚುರುಕುಗೊಳಿಸುತ್ತಿದ್ದೇವೆ. ಇದು ಭವಿಷ್ಯದ ಹೆಚ್ಚು ಸ್ವಾಯತ್ತ, ದಕ್ಷ ಮತ್ತು ಸುಸ್ಥಿರ ಕಾರ್ಯಾಚರಣೆಗಳನ್ನು ರೂಪಿಸಲು ನೆರವಾಗಲಿದೆ” ಎಂದು ತಿಳಿಸಿದ್ದಾರೆ.
ಹಿಂದಿನ ಆವೃತ್ತಿಗಳ ಯಶಸ್ಸಿನ ಆಧಾರದ ಮೇಲೆ, ಎಬಿಬಿ ಆಕ್ಸಿಲರೇಟರ್ ಇಂದು ಸಂಸ್ಥೆಯ ಪ್ರಮುಖ ಆವಿಷ್ಕಾರ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕಳೆದ ಎರಡು ವರ್ಷಗಳಲ್ಲಿ, ಇದು 2,000 ಕ್ಕೂ ಹೆಚ್ಚು ಪಾಲ್ಗೊಳ್ಳುವವರನ್ನು ಆಕರ್ಷಿಸಿದೆ ಮತ್ತು ಎಐ, ಆಟೊಮೇಷನ್, ಕ್ಲೌಡ್ ಹಾಗೂ ಡಿಜಿಟಲ್ ತಂತ್ರಜ್ಞಾನಗಳಾದ್ಯಂತ ಸುಮಾರು 700 ಅಂಗೀಕೃತ ಬಳಕೆಯ ಪ್ರಕರಣಗಳನ್ನು ಸೃಷ್ಟಿಸಿದೆ.
ಎಬಿಬಿ ಆಕ್ಸಿಲರೇಟರ್ ನ ಈ ಸಾಧನೆಯು ಜಾಗತಿಕ ಮಟ್ಟದಲ್ಲೂ ಮನ್ನಣೆ ಗಳಿಸಿದೆ. 2025 ರಲ್ಲಿ, ಈ ಕಾರ್ಯಕ್ರಮವು ಮೂರು ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದರಲ್ಲಿ ಈವೆಂಟ್ ಅವಾರ್ಡ್ – ಹ್ಯಾಕಥಾನ್ ವಿಭಾಗದಲ್ಲಿ ಗೋಲ್ಡ್ ಸ್ಟೀವಿ ಪ್ರಶಸ್ತಿ, ಜಾಗತಿಕ ಸಹಯೋಗದ ಸಾಧನೆಗಾಗಿ ಬ್ರಾಂಜ್ ಸ್ಟೀವಿ ಪ್ರಶಸ್ತಿ ಮತ್ತು ಸರ್ವಿಸ್ ಹಾಗೂ ಸೊಲ್ಯೂಷನ್ ವಿಭಾಗದಲ್ಲಿ ಅಂತರರಾಷ್ಟ್ರೀಯ ಆವಿಷ್ಕಾರ ಪ್ರಶಸ್ತಿ ಸೇರಿವೆ. ಭೌಗೋಳಿಕ ಗಡಿಗಳನ್ನು ಮೀರಿ ಪ್ರತಿಭೆ, ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಒಟ್ಟುಗೂಡಿಸಿ, ಸಹಯೋಗದ ಮೂಲಕ ಸಂಕೀರ್ಣ ವ್ಯವಹಾರದ ಸವಾಲುಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದಕ್ಕಾಗಿ ಈ ಗೌರವಗಳನ್ನು ನೀಡಲಾಗಿದೆ.







