ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆ, ಜಮ್‌ಷೆಡ್‌ಪುರದ ಮಣಿಪಾಲ್-ಟಾಟಾ ವೈದ್ಯಕೀಯ ಕಾಲೇಜು (ಎಂಟಿಎಂಸಿ), ಜಮ್‌ಷೆಡ್‌ಪುರದ ಬಾರಿಡಿಹ್ನಲ್ಲಿರುವ ಕ್ಯಾಂಪಸ್‌ನಲ್ಲಿ ತನ್ನ ಪ್ರಥಮ ಘಟಿಕೋತ್ಸವವನ್ನು ಇತ್ತೀಚೆಗೆ ಆಚರಿಸಿದ್ದು, ಮಾಹೆಯ 33ನೇ ಘಟಿಕೋತ್ಸವದ ಅಂಗವಾಗಿ ಈ ಸಮಾರಂಭ ನಡೆಯುತ್ತಿರುವುದು ಮಹತ್ವದ್ದಾಗಿದೆ.
2020-2021ರ ಶೈಕ್ಷಣಿಕ ಸಾಲಿನ 133 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರಥಮ ಬ್ಯಾಚ್ ಯಶಸ್ವಿಯಾಗಿ ಪದವಿ ಪೂರೈಸಿದ್ದು, ಇದು ಈ ವೈದ್ಯಕೀಯ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಹಾಗೂ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು.
ಸ್ಥಳೀಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಎಲ್ಲಾ ರೀತಿಯಲ್ಲೂ ಸಜ್ಜಾಗಿರುವ ವೈದ್ಯಕೀಯ ಪದವೀಧರರಿಗೆ ಅಧಿಕೃತವಾಗಿ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು ಪದವಿಗಳನ್ನು ಪ್ರದಾನ ಮಾಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಜಾರ್ಖಂಡ್‌ನ ಗೌರವಾನ್ವಿತ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಹಾಗೂ ಗೌರವ ಅತಿಥಿಯಾಗಿ ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಕೆ. ವಿಜಯ್ ಕುಮಾರ್ ಅವರು ಉಪಸ್ಥಿತರಿದ್ದರು. ಜತೆಗೆ, ಟಾಟಾ ಸ್ಟೀಲ್‌ನ ಕಾರ್ಪೊರೇಟ್ ಸೇವೆಗಳ ಉಪಾಧ್ಯಕ್ಷ ಸುಂದರ ರಾಮನ್, ಮಾಹೆ ವಿಶೇಷ ಯೋಜನೆಗಳ ಸಮೂಹ ಅಧ್ಯಕ್ಷ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಸೋಮನಾಥ್ ದಾಸ್ ಮತ್ತು ಎಂಟಿಎಂಸಿ ಡೀನ್ ಬ್ರಿಗೇಡಿಯರ್ (ಡಾ) ಹರೀಶ್ ಚಂದರ್ ಬಂಧು ಅವರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪದವಿ ಪಡೆದ ವಿದ್ಯಾರ್ಥಿಗಳ ಪೋಷಕರು ಮತ್ತು ಸ್ನೇಹಿತರು ಈ ಐತಿಹಾಸಿಕ ಕ್ಷಣವನ್ನು ಕಣ್ಣುಂಬಿಕೊಂಡರು. ಮಾಹೆ ಹಾಗೂ ಟಾಟಾ ಸ್ಟೀಲ್ ಸಂಸ್ಥೆಯ ಹಿರಿಯ ಪದಾಧಿಕಾರಿಗಳು, ಪ್ರಮುಖ ಶಿಕ್ಷಣ ತಜ್ಞರು, ಕಾಲೇಜಿನ ಪ್ರಾಧ್ಯಾಪಕರು ಮತ್ತು ಹಲವಾರು ಆಮಂತ್ರಿತ ಗಣ್ಯರು ಉಪಸ್ಥಿತರಿದ್ದರು.
ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರು, ‘ಈ ಘಟಿಕೋತ್ಸವವು ಕೇವಲ ಶೈಕ್ಷಣಿಕ ಸಾಧನೆಯ ಸಂಭ್ರಮವಲ್ಲ, ಬದಲಿಗೆ ಪದವೀಧರರು ಭವಿಷ್ಯದಲ್ಲಿ ಸಮಾಜಕ್ಕೆ ನೀಡಲಿರುವ ಕೊಡುಗೆಗಳ ಆಚರಣೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸಾಮಾಜಿಕ ಬದಲಾವಣೆಯ ಶಕ್ತಿಯುತ ಸಾಧನಗಳಾಗಿವೆ. ಹೆಚ್ಚು ಆರೋಗ್ಯವಂತ ಮತ್ತು ಸಮಾನತೆಯಿಂದ ಕೂಡಿರುವ ಸಮಾಜವನ್ನು ನಿರ್ಮಿಸಲು ಒಂದು ಬಲವಾದ ಅಡಿಪಾಯ ಹಾಕಿಕೊಡುವುದು ಇಂದಿನ ಅಗತ್ಯ’ ಎಂದು ಹೇಳಿದರು.
ಮುಂದುವರಿದು ಅವರು, ‘ವೈದ್ಯಕೀಯ ಎಂಬುದು ಕೇವಲ ವೃತ್ತಿಯಲ್ಲ, ಬದಲಿಗೆ ಅದು ಮಾನವಕುಲದ ಸೇವೆಯ ದೀಕ್ಷೆ. ಇಂದಿನ ದಿನಗಳಲ್ಲಿ ಎಐ, ರೊಬೊಟಿಕ್ಸ್ ಮತ್ತು ಆಧುನಿಕ ಆರೋಗ್ಯ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಆದರೆ, ಆರೋಗ್ಯ ರಕ್ಷಣೆಯ ನಿಜವಾದ ಜೀವಾಳ ಇರುವುದು ಸಹಾನುಭೂತಿ, ಪರಸ್ಪರ ನಂಬಿಕೆ ಮತ್ತು ಮಾನವೀಯ ಸಂಬಂಧಗಳಲ್ಲಿ ಮಾತ್ರʼ ಎಂದು ಅಭಿಪ್ರಾಯಪಟ್ಟರು.
ಘಟಿಕೋತ್ಸವ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗಿಯಾದ ಜಾರ್ಖಂಡ್ನ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸಚಿವ ಇರ್ಫಾನ್ ಅನ್ಸಾರಿ ಅವರು, ‘ನಮ್ಮ ಕೆಲಸ ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅವರಿಗಾಗಿ ಧ್ವನಿಯಾಗುವುದು, ಅವರ ನಂಬಿಕೆಯನ್ನು ಗಳಿಸುವುದು ಮತ್ತು ಅವರು ಕಷ್ಟದ ಸಮಯದಲ್ಲಿ ಸುರಕ್ಷಿತ, ಜವಾಬ್ದಾರಿಯುತ ಹಾಗೂ ಮಾನವೀಯ ಬೆಂಬಲ ವ್ಯವಸ್ಥೆಯಾಗಿ ನಿಲ್ಲುವುದೂ ನಮ್ಮ ಜವಾಬ್ದಾರಿ. ನಿಮ್ಮ ಚಿಕಿತ್ಸೆಯ ನಂತರ ಅವರು ಗುಣಮುಖರಾಗಿ ಹೊರನಡೆಯುವಾಗ, ಉತ್ತಮ ಹಾಗೂ ಆರೋಗ್ಯಕರ ವ್ಯವಸ್ಥೆ ಇದೆ ಎಂಬ ಭರವಸೆಯನ್ನು ರೋಗಿಗಳಲ್ಲಿ ಮೂಡಿಸುವುದು ನಿಮ್ಮ ಕರ್ತವ್ಯವಾಗಿದೆ.ʼ ಎಂದು ಕಿವಿಮಾತು ಹೇಳಿದರು.
ಪದವಿ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿಜಯ್ ಕುಮಾರ್ ಅವರು, ‘ಯುವ ವೈದ್ಯಕೀಯ ವೃತ್ತಿಪರರು ತಮ್ಮ ವೃತ್ತಿಯನ್ನು ಉತ್ಸಾಹ, ಪ್ರಾಮಾಣಿಕತೆ ಮತ್ತು ನಿರಂತರ ಕಲಿಕೆಯ ಬದ್ಧತೆಯೊಂದಿಗೆ ಮುನ್ನಡೆಸಬೇಕು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ಇತರ ಪೂರಕ ಸಿಬ್ಬಂದಿಗಳ ನಡುವಿನ ಸಾಂಘಿಕ ಶ್ರಮ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆʼ ಎಂದು ತಿಳಿಸಿದರು.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು, ‘ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಎಂಟಿಎಂಸಿ ಇಂದು ಶಕ್ತಿಶಾಲಿ ಶೈಕ್ಷಣಿಕ ಸಂಸ್ಥೆಯಾಗಿ ಹೊರಹೊಮ್ಮಿದೆ ಮತ್ತು ಉತ್ತಮ ಹೆಸರನ್ನು ಗಳಿಸುತ್ತಿದೆ. ಈ ಪ್ರಥಮ ಬ್ಯಾಚ್‌ನ ಪದವೀಧರರು, ದಿನೇ ದಿನೇ ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ, ಆತ್ಮವಿಶ್ವಾಸ ಮತ್ತು ನೈತಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ ಎಂಬ ದೃಢ ನಂಬಿಕೆ ನಮಗಿದೆ. ದೇಶ ಹಾಗೂ ವಿದೇಶಗಳ ಆರೋಗ್ಯ ವ್ಯವಸ್ಥೆಗೆ ಮಹತ್ತರವಾದ ಕೊಡುಗೆ ನೀಡಬಲ್ಲ ಸಮರ್ಥ ವೈದ್ಯರನ್ನು ಸಿದ್ಧಪಡಿಸುವುದೇ ನಮ್ಮ ನಿರಂತರ ಗುರಿʼ ಎಂದರು.
ಸೋಮನಾಥ್ ದಾಸ್, ‘ವೈದ್ಯಕೀಯ ಶಿಕ್ಷಣದಲ್ಲಿ ಖಾಸಗಿ–ಖಾಸಗಿ ಸಹಭಾಗಿತ್ವ ತರಬೇಕೆಂಬ ಸರ್ಕಾರದ ಆಶಯಕ್ಕೆ ಎಂಟಿಎಂಸಿಯಲ್ಲಿ ಉತ್ತಮ ಯಶಸ್ಸು ಸಿಕ್ಕಿದೆ. ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಯಶಸ್ವಿಯಾಗಿ ಪದವಿ ಪೂರೈಸಿರುವುದು ಈ ಒಪ್ಪಂದದ ಯಶಸ್ಸನ್ನು ಮತ್ತು ಸಮಾಜಕ್ಕೆ ಇದರಿಂದಾಗುವ ದೀರ್ಘಕಾಲದ ಪ್ರಯೋಜನವನ್ನು ತೋರಿಸಿಕೊಡುತ್ತದೆ’ ಎಂದರು.
ಟಾಟಾ ಸ್ಟೀಲ್ ಕಾರ್ಪೊರೇಟ್ ಸೇವೆಗಳ ವೈಸ್ ಪ್ರೆಸಿಡೆಂಟ್ ಡಿ. ಬಿ. ಸುಂದರ ರಾಮನ್ ಅವರು ಮಾತನಾಡಿ, ‘ಸಮಾಜದ ಒಳಿತಿಗಾಗಿ ಶ್ರಮಿಸುವುದು ಟಾಟಾ ಸ್ಟೀಲ್‌ನ ಮುಖ್ಯ ಗುರಿಯಾಗಿದೆ. ಅದಕ್ಕೆ ತಕ್ಕಂತೆ ಎಂಟಿಎಂಸಿ ಇಂದು ಸಮಾಜದ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ. ಈ ಭಾಗದ ಶಿಕ್ಷಣ, ಆರೋಗ್ಯ ಮತ್ತು ಜನರ ಪ್ರಗತಿಗೆ ಈ ಸಂಸ್ಥೆ ಒಂದು ದೀರ್ಘಕಾಲದ ಆಸ್ತಿಯಾಗಿದೆʼ ಎಂದು ಹೇಳಿದರು.
ಎಂಟಿಎಂಸಿ ಡೀನ್ ಬ್ರಿಗೇಡಿಯರ್ (ಡಾ) ಹರೀಶ್ ಚಂದರ್ ಬಂಧು ಎಲ್ಲರನ್ನೂ ಸ್ವಾಗತಿಸಿದರೆ, ಮಾಹೆ ಕುಲಸಚಿವ ಡಾ. ಗಿರಿಧರ್ ಕಿಣಿ ಅವರು ವಂದನಾರ್ಪಣೆ ಮಾಡಿದರು.
Jharkhand Governor Shri Santosh Kumar Gangwar presented the TMA Pai Gold Medal to Ms. Devarchana on the occasion of 1st Graduation Ceremony of MTMC, Jamshedpur as part of the 33rd Convocation held in Jamshedpur today. From left: Shri K. Vijay Kumar, IPS (Retd.), Senior Advisor – Ministry of Home Affairs, Government of India; Dr. Devarchana, Gold Medallist, MTMC; Shri Santosh Gangwar, Hon’ble Governor of Jharkhand; Dr. Sharath K. Rao, Vice Chancellor, MAHE.
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.