ಉಡುಪಿ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಆತ್ಮಹತ್ಯೆ ಹಾಗೂ ಅಸಹಜ ಸಾವು ಸಂಭವಿಸಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಯುಡಿಆರ್ ಪ್ರಕರಣಗಳು ದಾಖಲಾಗಿವೆ.
ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕುಂಟಾಡಿ ಹೊಸ ಮನೆ ನಿವಾಸಿ ಶೇಖರ ಪೂಜಾರಿ(72) ಅವರು ಮೇ 15ರ ರಾತ್ರಿ 11 ಗಂಟೆಯಿಂದ ಮೇ 16ರ ಬೆಳಿಗ್ಗೆ 6 ಗಂಟೆಯ ನಡುವೆ ಯಾವುದೋ ಕಾರಣದಿಂದ ಮನನೊಂದು ತಮ್ಮ ಕೊಟ್ಟಿಗೆಯ ಹೊರಭಾಗದಲ್ಲಿದ್ದ ಮರದ ಪಕ್ಕಾಸಿಗೆ ಹಗ್ಗ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಘಟನೆಯಲ್ಲಿ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಉಮೇಶ ನಾಯ್ಕ(59) ಅವರು ಮನೆಯ ಹಿಂಭಾಗದಲ್ಲಿದ್ದ ಮುರಕಲ್ಲಿನ ಮೇಲೆ ಬಿದ್ದಿದ್ದರು ಎನ್ನಲಾಗಿದೆ. ಬಳಿಕ ಅವರನ್ನು ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆ, ಮಣಿಪಾಲ ಕೆಎಂಸಿ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 15ರಂದು ರಾತ್ರಿ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಗೋವಾ ಮೂಲದ ಜಹಿರ್ ಅಬ್ದುಲ್ ಮಾಂಗಾವಕರ್(42) ಅವರು ಕುಟುಂಬ ಕಲಹದಿಂದ ಮಾನಸಿಕವಾಗಿ ನೊಂದು ಮೇ 16ರ ಬೆಳಿಗ್ಗೆ ಶಿರ್ವ ಸಮೀಪದ ಬೆಳಪುವಿನಲ್ಲಿರುವ ಪತ್ನಿಯ ಮನೆಯ ಎದುರಿನ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







