ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಅಂಗಸಂಸ್ಥೆಯಾದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎಂಐವಿ) ಮತ್ತು ಪುಣೆಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) – ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಜಂಟಿಯಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ವೈರೋಗ್ಲೋಬಲ್ 2026’ ಅಂತರಾಷ್ಟ್ರೀಯ ಸಮ್ಮೇಳನವು ಎಂಐವಿಯ ನಿರ್ದೇಶಕ ಡಾ. ಚಿರಂಜಯ್ ಮುಖೋಪಾಧ್ಯಾಯ ಹಾಗೂ ಪುಣೆಯ ಐಸಿಎಂಆರ್-ಎನ್ಐವಿಯ ನಿರ್ದೇಶಕ ಡಾ. ನವೀನ್ ಕುಮಾರ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಜರುಗಿತು.
ನವದೆಹಲಿಯ ಐಸಿಎಂಆರ್ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥೆ ಮತ್ತು ಹಿರಿಯ ವಿಜ್ಞಾನಿ ಡಾ. ನಿವೇದಿತಾ ಗುಪ್ತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಮತ್ತು ಸಹ ಕುಲಪತಿ ಡಾ. ಶರತ್ ಕೆ. ರಾವ್, ಸಮ್ಮೇಳನದ ಸಹ-ಸಂಘಟನಾ ಕಾರ್ಯದರ್ಶಿಗಳಾದ ಮುಂಬೈ ಐಸಿಎಂಆರ್-ಎನ್‌ಐವಿ ಘಟಕದ ಪ್ರಭಾರಿ ಅಧಿಕಾರಿ ಮತ್ತು ವಿಜ್ಞಾನಿ ಡಾ. ಶೈಲೇಶ್ ಡಿ. ಪವಾರ್ ಹಾಗೂ ಎಂಐವಿ ಸಹ-ಪ್ರಾಧ್ಯಾಪಕಿ ಡಾ. ಅನಿತಾ ಜೆ. ಹಾಗೂ ಜಗತ್ತಿನ ಪ್ರಮುಖ ವೈರಾಣು ತಜ್ಞರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು ಮಾತನಾಡಿ, ಮಣಿಪಾಲದಲ್ಲಿ ಅತ್ಯಾಧುನಿಕ ಬಿಎಸ್‌ಎಲ್-3 ಪ್ರಯೋಗಾಲಯದ ಬಗ್ಗೆ ಪ್ರಕಟಿಸಿದರು. ವೈದ್ಯಕೀಯ ಸಂಶೋಧನೆ ಮತ್ತು ರೋಗನಿರ್ಣಯದ ಸಾಮರ್ಥ್ಯವನ್ನು ಹೆಚ್ಚಿಸಲು ವೈದ್ಯಕೀಯ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ವಿವರಗಳನ್ನು ನೀಡಿದರು.
ಹಿರಿಯ ವಿಜ್ಞಾನಿ ಡಾ. ನಿವೇದಿತಾ ಗುಪ್ತಾ ಅವರು ತಮ್ಮ ಉದ್ಘಾಟನ ಭಾಷಣದಲ್ಲಿ, ‘ಕೇವಲ ಒಂದು ನಿರ್ದಿಷ್ಟ ವೈರಾಣುವನ್ನು ಪತ್ತೆಹಚ್ಚುವ ಪರೀಕ್ಷೆಗಳ ಬದಲಿಗೆ, ರೋಗದ ಲಕ್ಷಣಗಳ ಆಧಾರದ ಮೇಲೆ ಸಮಗ್ರವಾಗಿ ಪರೀಕ್ಷಿಸುವ ‘ಸಿಂಡ್ರೋಮಿಕ್ ವಿಧಾನ’ ಅಳವಡಿಸಿಕೊಳ್ಳಬೇಕಿದೆ. ನಮ್ಮ ದೇಶದಲ್ಲೇ ತಯಾರಿಸಿದ, ಕೈಗೆಟುಕುವ ದರದಲ್ಲಿ ಹಾಗೂ ತ್ವರಿತವಾಗಿ ಫಲಿತಾಂಶ ನೀಡುವ ರೋಗನಿರ್ಣಯ ಸಾಧನಗಳನ್ನು (ಪಾಯಿಂಟ್-ಆಫ್-ಕೇರ್ ಡಯಾಗ್ನಸ್ಟಿಕ್ಸ್] ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ. ‘ರಾಷ್ಟ್ರೀಯ ಒನ್ ಹೆಲ್ತ್ ಮಿಷನ್’ ಬಗ್ಗೆ ಮಾತನಾಡಿ ಯಾವುದೇ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ವಿವಿಧ ಕ್ಷೇತ್ರಗಳ ನಡುವೆ ಸಮನ್ವಯ ಸಾಧಿಸಿ, ವೇಗವಾಗಿ ಸ್ಪಂದಿಸುವ ಗುರಿಯನ್ನು ಹೊಂದಿದೆʼ ಎಂದು ಅವರು ವಿವರಿಸಿದರು.

ತಾಂತ್ರಿಕ ಅಧಿವೇಶನಗಳಲ್ಲಿ ಜಾಗತಿಕ ಮಟ್ಟದ ತಜ್ಞರು ವೈರಾಣು ವಿಜ್ಞಾನದ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಡಾ. ದೀಪಾ ಶರ್ಮಾ ಅವರು ಪೋಲಿಯೋ ನಿರ್ಮೂಲನೆಯ ಯಶಸ್ಸು, ದಡಾರ ಮತ್ತು ರುಬೆಲ್ಲಾ ರೋಗಗಳನ್ನು ತಡೆಯುವ ಮುಂದಿನ ಗುರಿಗಳ ಬಗ್ಗೆ ತಿಳಿಸಿದರು. ಮೆರ್ಕ್ ಸಂಸ್ಥೆಯ ಡಾ. ಸೌಮ್ಯ ಚಟರ್ಜಿ ಅವರು ಡೆಂಗ್ಯೂ ಲಸಿಕೆಗಳ ಆವಿಷ್ಕಾರದ ಬಗ್ಗೆ ವಿವರಿಸಿದರು. ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ಡಾ. ರೋಜರ್ ಹ್ಯೂಸನ್ ಅವರು ಉಣ್ಣೆಗಳಿಂದ ಹರಡುವ ವೈರಾಣುಗಳನ್ನು ತಂತ್ರಜ್ಞಾನದ ಮೂಲಕ ಪತ್ತೆಹಚ್ಚುವ ವಿಧಾನಗಳನ್ನು ತಿಳಿಸಿದರು. ಭಾರತ್ ಬಯೋಟೆಕ್‌ನ ಡಾ. ಕರ್ ಮುತ್ತುಮಣಿ ಅವರು ಜಾಗತಿಕ ವೈರಾಣು ಭೀತಿಗಳನ್ನು ಎದುರಿಸುವಲ್ಲಿ ‘ನ್ಯೂಕ್ಲಿಯಿಕ್ ಆಸಿಡ್’ ಆಧಾರಿತ ಲಸಿಕೆಗಳ ಶಕ್ತಿ ಮತ್ತು ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ನವೀನ್ ಕುಮಾರ್ ಮತ್ತು ಡಾ. ಚಿರಂಜಯ್ ಮುಖೋಪಾಧ್ಯಾಯ ಅವರು, ʼರೋಗನಿರ್ಣಯ ಕ್ಷೇತ್ರದಲ್ಲಿ ಒಂದು ಸಮಗ್ರ ಮತ್ತು ಸಂಯೋಜಿತ ವಿಧಾನದ ಅಗತ್ಯವಿದೆ. ಹೆಚ್ಚುತ್ತಿರುವ ಮತ್ತು ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ವೈರಾಣು ಸವಾಲುಗಳನ್ನು ಎದುರಿಸಲು ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೆಟರೀಸ್ ಮತ್ತು ಜಾಗತಿಕ ಸಹಯೋಗ ನೆರವಾಗಿದೆʼ ಎಂದು ಹೇಳಿದರು.







