ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಅವರೇ ಅಧ್ಯಕ್ಷರಾಗಿರುವ ರಂಗಭೂಮಿ ಉಡುಪಿ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಜಂಟಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಮತ್ತು ಮಹಾರಾಷ್ಟ್ರದ ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಸಹಭಾಗಿತ್ವದಲ್ಲಿ ಮಾ.1ರಿಂದ 8ರವರೆಗೆ ಮೂರು ದಿನಗಳ ಕಾಲ ಉಡುಪಿಯ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವ, ‘ರತ್ನಾಕರ ಉತ್ಸವ -2026 ‘ಉಡುಪಿಯ ಪ್ರೇಕ್ಷಕರಿಗೆ ಸಾಂಸ್ಕೃತಿಕ ಹಾಗೂ ಜಾನಪದದ ರಸದೌತಣವನ್ನೇ ಉಣ ಬಡಿಸಿತು.
2025ರಲ್ಲಿ ಇದೇ ವೇದಿಕೆಯಲ್ಲಿ ‘ಕೇರಳದ ಜಾನಪದ ಕಲಾ ವೈಭವ’ವನ್ನು ಆಯೋಜಿಸಿದ್ದ ಡಾ.ತಲ್ಲೂರು ಅವರು, ಈ ಬಾರಿ ಉತ್ತರ ಭಾರತದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳ ವ್ಯಾಪ್ತಿಯ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗನ್ನು ಅಲ್ಲದೆ ಕರ್ನಾಟಕ ಕರಾವಳಿಯ ಜಾನಪದ ಕಲೆಗಳನ್ನು ಸೇರಿಸಿಕೊಂಡು ಈ ‘ರತ್ನಾಕರ ಉತ್ಸವ -2026’ನ್ನು ಆಯೋಜಿಸಿದ್ದರು.
ಈ ಮೂರು ದಿನಗಳ ಕಾಲ ನಡೆದ ಈ ಉತ್ಸವಕ್ಕೆ ಭಾರತ ಸರಕಾರದಿಂದ ಸ್ಥಾಪಿತವಾದ ಏಳು ಸಾಂಸ್ಕೃತಿಕ ವಲಯ ಕೇಂದ್ರಗಳಲ್ಲಿ ಒಂದಾದ ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ಸಾಥ್ ನೀಡಿತ್ತು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳ ವ್ಯಾಪ್ತಿಯಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಪೋಷಿಸುವ, ಉತ್ತೇಜಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಯ ನಿರ್ದೇಶಕಿ ಆಸ್ಥಾ ಎಂ. ಕಾರ್ಲೇಕರ್ ಅವರ ಸಹಕಾರದಲ್ಲಿ ಉತ್ತರ ಭಾರತದ ಹಲವಾರು ಜಾನಪದ ಸಂಘಟನೆಗಳು ಉಡುಪಿಗೆ ಆಗಮಿಸಿ, ಅಲ್ಲಿನ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಡುಪಿ ಜನತೆಗೆ ಪರಿಚಯಿಸಿದರು.
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು, ಜಾನಪದ ನೃತ್ಯ, ಸಂಗೀತ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಉತ್ಸವಗಳ ಆಯೋಜನೆಗಳ ಮೂಲಕ ವಿವಿಧ ರಾಜ್ಯಗಳ ಕಲೆಗಳನ್ನು ಒಂದೆಡೆ ಸೇರಿಸುವ ಮೂಲಕ ‘ವೈವಿಧ್ಯತೆಯಲ್ಲಿ ಏಕತೆ’ ಯನ್ನು ಉತ್ತೇಜಿಸುವ ಕಾರ್ಯ ಈ ಉತ್ಸವದಿಂದ ನಡೆಯಿತು.
ಏನೆಲ್ಲಾ ಕಲಾ ಪ್ರಕಾರಗಳು : ಮಾರ್ಚ್ 6ರಂದು ಸಂಜೆ 6 ಗಂಟೆಗೆ ಈ ಉತ್ಸವಕ್ಕೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕೃತ ಚಾಲನೆ ನೀಡಿದರು. ಮೂರು ದಿನಗಳ ಕಾಲ ಸುಮಾರು 300 ಮಂದಿ ಕಲಾವಿದರು ವಿಭಿನ್ನ ಜಾನಪದ ಕಲಾಪ್ರಕಾರಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ‘ಜಾನಪದ ಕಲಾ ವೈವಿಧ್ಯ 1,2 ಮತ್ತು 3 ‘ ಎಂದು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಆಂಧ್ರ ಪ್ರದೇಶದ ಉರುಮುಲು ನೃತ್ಯ, ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ್‌ಗಳಲ್ಲಿ ಪ್ರಚಲಿತದಲ್ಲಿರುವ ಬಧಾಯಿ/ನೋರ್ತಾ ನೃತ್ಯ, ಮರಾಟಿ ಜಾನಪದ ರಂಗಭೂಮಿಯ ಲಾವಣಿ ನೃತ್ಯ ಪ್ರಕಾರ, ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದ ಕೋಲಿ ನೃತ್ಯ, ಮಹಾರಾಷ್ಟ್ರದ ವಾರ್ಲಿ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಜಾನಪದ ಟಾರ್ಪಾ ನೃತ್ಯ, ಛತ್ತೀಸ್‌ಗಢದ ಪ್ರಸಿದ್ದ ಜಾನಪದ ವಂತಿ ನೃತ್ಯ, ತೆಲಂಗಾಣದ ಗುಸ್ಸಾಡಿ ನೃತ್ಯ , ಕರ್ನಾಟಕದ ಕೆಲವು ಭಾಗಗಳು ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಚಲಿತವಿರುವ ಗೋಂದೋಳು, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬರುವ ಕೊರಗರ ಕುಣಿತ, ಮುಂಡಾಲ ಜನಾಂಗದ ವತಿಯಿಂದ ಮಾಯಿ ತಿಂಗಳ ಹುಣ್ಣಿಮೆಯ ಕಾಲದಲ್ಲಿ ಆಚರಿಸುವ ಕಂಗೀಲು ನೃತ್ಯ – ಮೊದಲಾದ ಜಾನಪದ ನೃತ್ಯ ಪ್ರಕಾರಗಳು ಮುದ್ದಣ ಮಂಟಪದಲ್ಲಿ ಅಪೂರ್ವವಾದ ಜಾನಪದ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದ್ದವು. ಸಭಿಕರು ಮೂರು ಗಂಟೆಗಳ ಕಾಲದ ಈ ಪ್ರದರ್ಶವನ್ನು ಎವೆಯೆಕ್ಕದೆ ವೀಕ್ಷಿಸಿ ಆನಂದಪಟ್ಟರು.
ಕರ್ನಾಟಕ ಕರಾವಳಿಯ ಜಾನಪದ ಕಲೆಗಳನ್ನು ನೋಡಿ ಆನಂದಿಸಿದರೆ ಸಾಲದು, ಅನ್ಯ ರಾಜ್ಯಗಳ ಜಾನಪದ, ಸಾಂಸ್ಕೃತಿಕ ಕಲೆಗಳನ್ನು ನಮ್ಮ ಜಿಲ್ಲೆಯ ಜನರು ವೀಕ್ಷಿಸಿ ಆನಂದ ಪಡಬೇಕು ಎಂಬ ಸದಾಶಯದೊಂದಿಗೆ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದು ಅವರ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿತು. ಇಂತಹ ಪ್ರದರ್ಶನ ಕೇವಲ ಡಾ.ತಲ್ಲೂರು ಅವರಿಂದ ಮಾತ್ರ ಸಂಘಟಿಸಲು ಸಾಧ್ಯ ಎಂಬ ಮಾತು ಸಭಾವಲಯದಲ್ಲಿ ಕೇಳಿಬಂತು.
ಪ್ರದರ್ಶನಗೊoಡ ಕಲಾ ಪ್ರಕಾರಗಳ ಬಗ್ಗೆ ಸ್ವಲ್ಪ ಮಾಹಿತಿ :
1).ಉರುಮುಲು ನೃತ್ಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟವಾದ ಜಾನಪದ ಆರಾಧನಾ ನೃತ್ಯ. ಇದರಲ್ಲಿ ನರ್ತಕರು ‘ಉರುಮು’ ಎಂಬ ಗುಡುಗಿನಂತಹ ಶಬ್ದವನ್ನು ಹೊರಡಿಸುವ ಚರ್ಮ ವಾದ್ಯವನ್ನು ಎದೆಯ ಮೇಲೆ ನೇತುಹಾಕಿಕೊಂಡು ಡೊಳ್ಳಿನಂತೆ ಬಾರಿಸುತ್ತಾ ನೃತ್ಯ ಮಾಡುತ್ತಾರೆ. ಆದ್ದರಿಂದಲೇ ಇದನ್ನು ಗುಡುಗುನೃತ್ಯ’ ಎಂದೂ ಕರೆಯುತ್ತಾರೆ. ಈ ನೃತ್ಯದಲ್ಲಿ ಪುರುಷರು ದೊಡ್ಡ ತಲೆಪಾಗು, ಬಣ್ಣದ ಉಡುವುಗಳನ್ನು ಧರಿಸಿ, ಮಳೆಯ ದೇವತೆ ಗಂಗಮ್ಮನನ್ನು ಹೊಗಳುವ ಹಾಡುಗಳನ್ನು ಹಾಡುತ್ತ ವ್ಯತ್ತಾಕಾರವಾಗಿ ವೇಗದ ಹೆಜ್ಜೆಗಳನ್ನು ಹಾಕುತ್ತಾರೆ. ಇದನ್ನು ಗ್ರಾಮದ ಜಾತ್ರೆಗಳು, ವಿಶೇಷ ಸಂದರ್ಭಗಳು ಮತ್ತು ಮಳೆಗಾಗಿ ಪ್ರಾರ್ಥಿಸುವ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ.
2). ಬಧಾಯಿ/ನೋರ್ತಾ ನೃತ್ಯ : ಈ ನೃತ್ಯ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಮೊದಲಾದ ರಾಜ್ಯಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಸುವ ಸಾಂಪ್ರದಾಯಿಕ ನೃತ್ಯ. ಇದು ಬಹುತೇಕ ತೃತೀಯ ಲಿಂಗಿಗಳ ಸಮುದಾಯದವರು ಮನೆಮನೆಗೆ ತೆರಳಿ, ದೇವಿಯ ಸ್ತುತಿಗೀತೆಗಳನ್ನು ಹಾಡುತ್ತಾ, ಡೋಲಕ್ ತಾಳಕ್ಕೆ ನರ್ತಿಸುತ್ತಾ, ಮನೆಗಳಲ್ಲಿ ಸುಖ-ಸಮೃದ್ಧಿಯನ್ನು ಹಾರೈಸುತ್ತಾರೆ. ಇದನ್ನು ‘ನೋರ್ತಾ’ ಅಥವಾ ‘ಬಧಾಯಿ’ (ಬಧಾಯಿ ಎಂದರೆ ಅಭಿನಂದನೆ/ಶುಭಾಶಯ) ಎಂದು ಕರೆಯುತ್ತಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ಆರಾಧನೆಯ ಭಾಗವಾಗಿ, ದೇವಿಯ ಅನುಗ್ರಹವನ್ನು ಬೇಡಿ ಮನೆಮಂದಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸುವ, ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ವಿಶೇಷ ಆಚರಣೆ ಇದಾಗಿದೆ.
3). ಲಾವಣಿ : ಮರಾಠಿ ಜಾನಪದ ರಂಗಭೂಮಿಯ ಲೋಕಪ್ರಿಯಕಲೆ ಲಾವಣಿ. ಇದು ವೇಗವಾದ ಹೆಜ್ಜೆ ಮತ್ತು ಕೈ ಚಲನೆ, ನವರಸಗಳ ಸಮರ್ಥ ಅಭಿವ್ಯಕ್ತಿ, ಶಕ್ತಿಯುತ ದೇಹ ಭಾಷೆ ಮತ್ತು ನಾಟಕೀಯ ನಿರೂಪಣೆಗಳ ಮೂಲಕ ಮನರಂಜಿಸುವ ಕಲಾ ಪ್ರಕಾರ. ಲಾವಣಿ ನೃತ್ಯಗಾರ್ತಿಯರು ಒಂಬತ್ತು ಗಜಗಳ (ನೌವಾರಿ) ಸೀರೆಯನ್ನು ಧರಿಸಿ ಸಾಂಪ್ರದಾಯಿಕ ಆಭರಣಗಳೊಂದಿಗೆ ವೇಗದ ತಾಳಕ್ಕೆ, ಭಾವಪೂರ್ಣ ಅಭಿನಯದೊಂದಿಗೆ ಪ್ರದರ್ಶನ ನೀಡುತ್ತಾರೆ. ಇದು ಪ್ರೀತಿ-ಪ್ರೇಮ, ಶೃಂಗಾರ, ಸಾಮಾಜಿಕ, ತಾತ್ವಿಕ ಮತ್ತು ರಾಜಕೀಯ ವಿಷಯಗಳ ಕುರಿತು ಪ್ರೇಕ್ಷಕರೊಂದಿಗೆ ತಾದಾತ್ಮ ಸಾಧಿಸಿ, ಪ್ರದರ್ಶನಗೊಳ್ಳುತ್ತದೆ. ಧೋಲಿ, ಹಾರ್ಮೋನಿಯಂ, ತಾಳ, ಗೆಜ್ಜೆ, ತಬಲಾ ಮತ್ತು ದಫ್ ವಾದ್ಯಗಳನ್ನು ಬಳಸಲಾಗುತ್ತದೆ.
4). ಕೋಲಿ ನೃತ್ಯ : ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದ (ಕೋಲಿಗಳು) ಸಾಂಪ್ರದಾಯಿಕ ಜಾನಪದ ನೃತ್ಯ ಇದಾಗಿದೆ. ಸಮುದ್ರದ ಅಲೆಗಳ ಲಯಬದ್ಧ ಚಲನೆ, ಮೀನು ಹಿಡಿಯುವ ಮತ್ತು ದೋಣಿ ನಡೆಸುವ ಭಂಗಿಗಳ ಮೂಲಕ ಮೀನುಗಾರರ ಜೀವನದ ಸಂಭ್ರಮ, ಸಮುದ್ರದ ಮೇಲಿನ ಪ್ರೀತಿ ಮತ್ತು ಅವರ ಸಂಸ್ಕೃತಿಯನ್ನು ಇದು ಪ್ರತಿಬಿಂಬಿಸುತ್ತದೆ. ಪುರುಷರು ಮತ್ತು ಮಹಿಳೆಯರು ತಂಡವಾಗಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಕೈಯಲ್ಲಿ ಕೋಲು ಅಥವಾ ಮೀನುಗಾರಿಕೆಗೆ ಬಳಸುವ ವಸ್ತುಗಳನ್ನು ಹಿಡಿದು ವೇಗವಾಗಿ ಕುಣಿಯುತ್ತಾರೆ. ಇದನ್ನು ಹಬ್ಬ-ಹರಿದಿನಗಳಲ್ಲಿ ಹಾಗೂ ವಿಶೇಷವಾಗಿ ನಾರಿ ಹುಣ್ಣಿಮೆಯಂತಹ ಮೀನುಗಾರಿಕೆ ಋತುವಿನ ಆರಂಭದ ಸಂದರ್ಭದಲ್ಲಿ ಪ್ರದರ್ಶಿಸುತ್ತಾರೆ.
5). ಟಾರ್ಪಾ ನೃತ್ಯ : ಮಹಾರಾಷ್ಟ್ರದ ವಾರ್ಲಿ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಜಾನಪದ ನೃತ್ಯ. ಇದು ಸುಗ್ಗಿಯ ಕಾಲದ ರಾತ್ರಿಗಳಲ್ಲಿ ಟಾರ್ಪಾ ಎಂಬ ವಾದ್ಯದ ಲಯಕ್ಕೆ ತಕ್ಕಂತೆ, ಪುರುಷರು ಮತ್ತು ಮಹಿಳೆಯರು ಪರಸ್ಪರ ಕೈ ಹಿಡಿದು ವ್ಯತ್ತಾಕಾರವಾಗಿ ನೃತ್ಯ ಮಾಡುವ ಮೂಲಕ ಪ್ರಕೃತಿ ಮತ್ತು ಜೀವನವನ್ನು ಸಂಭ್ರಮಿಸುವ ಅದ್ಭುತ ಕಲೆ. ಈ ನೃತ್ಯವು ವಾರ್ಲಿ ಚಿತ್ರಕಲೆಯ ಕೇಂದ್ರಬಿoದುವಾಗಿದೆ.
6). ವಂತಿ ನೃತ್ಯ : ಛತ್ತೀಸ್‌ಗಢದ ಪ್ರಸಿದ್ದ ಜಾನಪದ ನೃತ್ಯ ವಂತಿ ನೃತ್ಯ. ಇದು ಸಮಾನತೆ, ಸತ್ಯ ಮತ್ತು ಭಾತೃತ್ವದ ಸಂದೇಶವನ್ನು ಸಾರುವ ಭಕ್ತಿ ಮತ್ತು ಆಧ್ಯಾತ್ಮಿಕ ನೃತ್ಯವಾಗಿದೆ. ಸತ್ನಾಮಿ ಸಮುದಾಯದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಇದನ್ನು ಗುರು ಘಾಸಿದಾಸ್ ಜಯಂತಿಯ ಸಂದರ್ಭದಲ್ಲಿ ಹೆಚ್ಚಾಗಿ ಪ್ರದರ್ಶಿಸುತ್ತಾರೆ. ಬಿಳಿ ಧೋತಿ ಮತ್ತು ಪೇಟ ಧರಿಸಿದ ನರ್ತಕರು ಮೃದಂಗ ಮತ್ತು ಝಾಂಝ (ತಾಳ) ನಾದಕ್ಕೆ, ಅನುಗುಣವಾಗಿ, ವೇಗದ ಹೆಜ್ಜೆ ಮತ್ತು ಮಾನವ ಪಿರಮಿಡ್‌ಗಳಂತಹ ಅದ್ಭುತ ಭಂಗಿಗಳೊoದಿಗೆ ಪ್ರದರ್ಶನ ನೀಡುತ್ತಾರೆ.
7). ಗುಸ್ಸಾಡಿ ನೃತ್ಯ : ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ರಾಜಗೊಂಡ ಮತ್ತು ಕೋಲಂ ಬುಡಕಟ್ಟು ಜನಾಂಗದ ಪುರುಷರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸುವ ರೋಮಾಂಚಕ ಜಾನಪದ ನೃತ್ಯ. ನವಿಲು ಗರಿಗಳ ಟೋಪಿ, ಮೇಕೆಯ ಚರ್ಮದ ಬಟ್ಟೆ ಧರಿಸಿ, ಡೋಲು ಮತ್ತು ಕೊಳಲುಗಳ ಸದ್ದಿಗೆ ಪುರುಷರು ನರ್ತಿಸುವ ಈ ಕಲೆ ಗೊಂಡರ ಸಂಸ್ಕೃತಿಯ ಸಂಕೇತವಾಗಿದ್ದು, 15 ದಿನಗಳ ಕಾಲ ನಡೆಯುವ ಆಚರಣೆಯ ಭಾಗವಾಗಿದೆ.
8). ಗೋಂದೊಳು : ಕರ್ನಾಟಕದ ಕೆಲವು ಭಾಗಗಳು ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಚಲಿತವಿರುವ ಶಕ್ತಿ ದೇವತೆಯ ಆರಾಧನೆ ಇದಾಗಿದೆ. ಇದು ಮದುವೆ, ಉಪನಯನ, ಶುಭ ಸಮಾರಂಭಗಳ ಸಂದರ್ಭದಲ್ಲಿ ಮತ್ತು ದುಷ್ಟಶಕ್ತಿಗಳನ್ನು ದೂರವಿಡಲು ಮಾಡಲಾಗುವ ಆಚರಣೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರಚಲಿತದಲ್ಲಿರುವ ಗೊಂದೊಳು ಕುಣಿತವನ್ನು ಶತಮಾನಗಳ ಹಿಂದೆ ಮಹಾರಾಷ್ಟ್ರದಿಂದ ಕರಾವಳಿ ಕರ್ನಾಟಕಕ್ಕೆ ವಲಸೆ ಬಂದ ಮರಾಟಿ ನಾಯ್ಕ ಜನಾಂಗದವರು ಇಂದಿಗೂ ಮುಂದುವರಿಸುತ್ತಿದ್ದಾರೆ. ಚೌಡಿಕೆ, ತಾಳಗಳನ್ನು ನುಡಿಸುತ್ತ, ಭಕ್ತಿ ಪ್ರಧಾನ ಮರಾಟಿ, ಕನ್ನಡ ಗೀತೆಗಳನ್ನು ಹಾಡುತ್ತ, ನಾಗಸ್ವರದ ಸಂಗೀತಕ್ಕೆ ಅನುಗುಣವಾಗಿ ನರ್ತಿಸುವ ಮೂಲಕ ರಾತ್ರಿಯ ವೇಳೆಯಲ್ಲಿ ದೈವಿಕ ಲೋಕವೊಂದನ್ನು ಅನಾವರಣಗೊಳಿಸುತ್ತಾರೆ.
9). ಕೊರಗರ ಕುಣಿತಗಳು: ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬರುವ ಅದಿವಾಸಿ ಕೊರಗ ಜನಾಂಗ ಸಮೃದ್ಧ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಪ್ರಕೃತಿಯ ಆರಾಧಕರಾದ ಕೊರಗರು ತಮ್ಮ ಸಂಸ್ಕೃತಿ, ನಂಬಿಕೆ ಮತ್ತು ಜೀವನಶೈಲಿಯನ್ನು ಹಾಡು, ಕುಣಿತ, ವಾದ್ಯಗಳ ಮೂಲಕ ಅನಾವರಣಗೊಳಿಸುತ್ತಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತಿ ಸೂಕ್ಷ್ಮ ಆದಿವಾಸಿ ಪಂಗಡವಾಗಿರುವ ಕೊರಗರು
ಆಧುನಿಕತೆಯಿಂದ ಅಂತರವಿರಿಸಿ, ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಸರಳ, ಆಕರ್ಷಕ ಉಡುಪು, ತಮ್ಮ ಅಸ್ಮಿತೆಯ ಸಂಕೇತವಾದ ಡೋಲು ಹಾಗೂ ಕೊಳಲು, ಜೊತೆಗೆ ಚಂಡೆ ಮತ್ತು ತಾಳ ಬಳಸಿ ಕಟ್ಟಿಕೊಡುವ ಮಾಯಾಲೋಕ ನಮ್ಮ ನೆಲ ಮೂಲದ ಬೇರುಗಳನ್ನು ನೆನಪಿಸುತ್ತದೆ.
10). ಕಂಗೀಲು : ಮಾಯಿ ತಿಂಗಳ ಹುಣ್ಣಿಮೆಯ ಕಾಲದಲ್ಲಿ ಮುಂಡಾಲ ಜನಾಂಗ ಜನಾಂಗದವರು ಈ ಆರಾಧನಾ ಕಲೆಯನ್ನು ನಡೆಸಿ ಕೊಡುವುದು ರೂಢಿ. ಇದರಲ್ಲಿ ನರ್ತಕರು ತೆಂಗಿನ ತಿರಿಯನ್ನು ಉಡುಪಾಗಿ ಧರಿಸಿ, ಡೋಲು-ಚಂಡೆಯ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ. ಹಾಡಿನ ಸಾಹಿತ್ಯವನ್ನು ಗಮನಿಸಿದರೆ ಇದೊಂದು ಕಾಮದೇವನ ಕುಣಿತ. ಇದರಲ್ಲಿ ನಡುವೆ ಕುಣಿಯುವವವನು ಕೃಷ್ಣ ಅಥವಾ ಕೊರಗರ ಸಾಂಸ್ಕೃತಿಕ ಪುರುಷ ‘ಕಡೆಗಣ’. ಈತನ ಸುತ್ತ ಸಿರಿಯ ಮಕ್ಕಳು ಅಥವಾ ಗೋಪಾಲಕರು ಕುಣಿಯುತ್ತಾರೆ. ಸಿರಿ ಮಕ್ಕಳು ಮನೆಯ ಮುಂದೆ ಕುಣಿದು ಪಡಿ-ಕಾಣಿಕೆ ದಾನವಾಗಿ ಮನೆಯ ಯಜಮಾನತಿಯಿಂದ ಪಡೆದರೆ ಕಡೆಗಣ ಪಾತ್ರಧಾರಿ ಮನೆಯ ಹಿಂಭಾಗದಲ್ಲಿ ಹೋಗಿ ದಾನ ಪಡೆಯುವುದು ಈ ಆರಾಧನಾ ಪದ್ಧತಿಯ ವೈಶಿಷ್ಟ್ಯ. ಭಕ್ತಾದಿಗಳು ಕೊಡುವ ಪಡಿ-ಕಾಣಿಕೆಯನ್ನು ಕಡೆಗಣ ಪಡೆದು ತನ್ನ ಹಣೆಯಲ್ಲಿನ ಕಪ್ಪು ಮಸಿಯನ್ನು ಭಕ್ತಾದಿಗಳ ಹಣೆಗೆ ಸೋಕಿಸುತ್ತಾನೆ. ಸಸ್ಯ ಸಮೃದ್ಧಿ ಹಾಗೂ ರೋಗ ಪರಿಹಾರದ ಆಶಯಗಳ ಜೊತೆಗೆ ಇದು ಮನರಂಜಕವಾಗಿಯೂ ಪ್ರಸಿದ್ಧವಾಗಿದೆ.
ಕನ್ನಡ ನಾಡಿನ ಜಾನಪದ ಕಲೆಗಳು ಉಳಿದು ಬೆಳೆಯುವಂತಾಗಬೇಕು ಎಂಬುದೇ ನನ್ನ ಹಿರಿದಾಸೆ. ಈ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ರಂಗಭೂಮಿ ಉಡುಪಿ ಸಂಸ್ಥೆಯ ಸಹಕಾರದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸಹಕಾರದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನಪದ ಉತ್ಸವಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಅಭಿಯಾನದಿಂದಾಗಿ ಜಿಲ್ಲೆಯ ತೆರೆಮರೆಯಲ್ಲಿದ್ದ ಅನೇಕ ಜಾನಪದ ಕಲಾವಿದರು ಮುನ್ನಲೆಗೆ ಬರುವಂತಾಗಿತ್ತು. ಒಂದಷ್ಟು ಜಾನಪದ ಕಲಾತಂಡಗಳ ಹುಟ್ಟಿಗೂ ಇದು ಕಾರಣವಾಗಿತ್ತು. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಮೂಲಕ ಜಿಲ್ಲೆಯ ಸಾಧಕ ಜಾನಪದ ಕಲಾವಿದರು, ಕಲಾ ಸಂಘಟಕರನ್ನು ಗುರುತಿಸಿ ಅವರಿಗೆ ಜಾನಪದ ಪ್ರಶಸ್ತಿ ನೀಡುವ ಕಾರ್ಯ ಮಾಡುತ್ತಿದ್ದೇನೆ. ಕರ್ನಾಟಕ ಮಾತ್ರವಲ್ಲದೆ ದೇಶದ ಅನ್ಯ ರಾಜ್ಯಗಳ ಜಾನಪದ ಕಲೆಗಳನ್ನು ಇಲ್ಲಿ ಪ್ರದರ್ಶಿಸಿ ಅದನ್ನು ಸ್ಥಳೀಯರಿಗೆ ಪರಿಚಯಿಸಬೇಕು ಎನ್ನುವ ಹಂಬಲ ಇದೀಗ ನನಸಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಕೇರಳದ ಜಾನಪದ ಸಂಸ್ಕೃತಿಯನ್ನು ಪರಿಚಯಿಸಲಾಗಿತ್ತು. ಇದೀಗ ಉತ್ತರ ಭಾರತದ 9 ರಾಜ್ಯಗಳ ಜಾನಪದ ನೃತ್ಯ ಪ್ರಕಾರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಯಕ್ಷಗಾನ, ನಾಟಕ ಕಲೆಗಳಿಗೆ ಸಿಗುವ ಪ್ರೋತ್ಸಾಹ ಜನಪದಕ್ಕೂ ಸಿಗಬೇಕು. ಜನಪದ ಸಂಸ್ಕೃತಿ ಬೆಳೆಯಬೇಕು. ಯಕ್ಷಗಾನ, ರಂಗಭೂಮಿ ತರಬೇತಿಯನ್ನು ಇದೀಗ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಜಾನಪದ ಕಲೆಗಳನ್ನು ಯುವ ಸಮುದಾಯಕ್ಕೆ ದಾಟಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಕ್ಷ ಶಿಕ್ಷಣ, ರಂಗಶಿಕ್ಷಣದoತೆ ಜನಪದ ಶಿಕ್ಷಣವನ್ನು ಕೂಡಾ ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಚಿಂತನೆ ಮನದಲ್ಲಿದೆ.
ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಜಿಲ್ಲಾಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು.






