ಅಮಾಸೆಬೈಲು, ಮಾ.22: ಅಮಾಸೆಬೈಲು ಗ್ರಾಮದ 8ನೇ ಮೈಲಿ ಕಲ್ಲು ಸಮೀಪ ಜಡ್ಡಿನಗದ್ದೆ ರಸ್ತೆಯಲ್ಲಿ ಗೂಡ್ಸ್ ರಿಕ್ಷಾ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿ ಓರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಪ್ರದೀಪ್ ನಾಯಕ್ (46) ಅವರ ದೂರಿನ ಪ್ರಕಾರ, ಅವರು ಅಮಾಸೆಬೈಲಿನಿಂದ ಬೀಮಾ ಬೆಳಾರ್ ಜೆಡ್ಡು ಕಡೆಗೆ ತೆರಳುತ್ತಿದ್ದ ವೇಳೆ ತಮ್ಮ ಎದುರಿನಲ್ಲಿ ಪರಿಚಿತನಾದ ಶೀನ ಪೂಜಾರಿ ಅವರು KA-20-EG-1802 ಸಂಖ್ಯೆಯ TVS XL ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದರು. ಈ ವೇಳೆ ಎದುರಿನಿಂದ ಜಡ್ಡಿನಗದ್ದೆ ಅಮಾಸೆಬೈಲು ಕಡೆಗೆ ಬರುತ್ತಿದ್ದ KA-20-AC-1484 ಸಂಖ್ಯೆಯ ಗೂಡ್ಸ್ ರಿಕ್ಷಾ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಶೀನ ಪೂಜಾರಿ ಅವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ತಲೆಯ ಎಡಭಾಗ, ಎಡ ಭುಜ ಹಾಗೂ ಎಡ ತೊಡೆಯ ಭಾಗದಲ್ಲಿ ರಕ್ತಗಾಯಗಳಾಗಿವೆ. ತಕ್ಷಣ ಗಾಯಾಳುವರನ್ನು ಎತ್ತಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







