ಮಣಿಪಾಲ್, ಮಾರ್ಚ್ 18, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಬಯೋಸೇಫ್ಟಿ ಲೆವೆಲ್-3 (ಬಿಎಸ್‌ಎಲ್-3) ಪ್ರಯೋಗಾಲಯಕ್ಕೆ ಯಶಸ್ವಿಯಾಗಿ ಪ್ರಮಾಣೀಕರಣ ದೊರೆತಿದೆ. ಜೀವವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗತಿಕ ಆರೋಗ್ಯ ಸುರಕ್ಷೆಯಲ್ಲಿ ಶ್ರೇಷ್ಠತೆ ಸಾಧಿಸುವ ವಿಶ್ವವಿದ್ಯಾಲಯದ ಬದ್ಧತೆಯ ಹಾದಿಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ (ಎಂಐವಿ) ಸಂಶೋಧನೆ, ರೋಗ ಪತ್ತೆ ಮತ್ತು ತರಬೇತಿ ಕಾರ್ಯಗಳಿಗೆ ಈ ಸಾಧನೆ ಮಹತ್ತರ ಬಲ ನೀಡಿದೆ. ಬಿಎಸ್‌ಎಲ್-3 ಪ್ರಯೋಗಾಲಯಗಳು ಉಸಿರಾಟದ ಮೂಲಕ ಹರಡುವ, ಗಂಭೀರ ಸೋಂಕುಕಾರಕ ಸೂಕ್ಷ್ಮಜೀವಿಗಳ ಸುರಕ್ಷಿತವಾದ ಅಧ್ಯಯನಕ್ಕಾಗಿ ವಿನ್ಯಾಸಗೊಳಿಸಲಾದ ವಿಶೇಷ ಸುರಕ್ಷತಾ ವ್ಯವಸ್ಥೆಯ ಪ್ರಯೋಗಾಲಯಗಳಾಗಿವೆ. ಈ ಪ್ರಮಾಣೀಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಬಯೋಸೇಫ್ಟಿ ಮತ್ತು ಬಯೋಸೆಕ್ಯುರಿಟಿ ಮಾನದಂಡಗಳನ್ನು ಮಾಹೆ ಅನುಸರಿಸುತ್ತಿರುವುದನ್ನು ಸೂಚಿಸುವುದರ ಜತೆಗೆ, ಪ್ರಯೋಗಾಲಯಗಳ ಸುರಕ್ಷತೆ ಮತ್ತು ವೈಜ್ಞಾನಿಕ ಸಂಶೋಧನೆಯನ್ನು ನಿಷ್ಠೆಯಿಂದ ನಡೆಸಲು ವಿಶ್ವವಿದ್ಯಾಲಯ ನೀಡುತ್ತಿರುವ ಮಹತ್ವವನ್ನೂ ಇದು ತೋರಿಸುತ್ತದೆ.
ಈ ಬಿಎಸ್‌ಎಲ್-3 ಪ್ರಯೋಗಾಲಯವನ್ನು ಅತ್ಯಾಧುನಿಕ ಸೌಲಭ್ಯ, ಸುಧಾರಿತ ಬಯೋಸೇಫ್ಟಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ವಿಶೇಷ ನಿಯಂತ್ರಿತ ವಿನ್ಯಾಸ, ನೆಗೆಟಿವ್ ಪ್ರೆಶರ್ ಇರುವ ಗಾಳಿಯ ಹರಿವು ವ್ಯವಸ್ಥೆ, ಎಚ್‌ಇಪಿಎ ಫಿಲ್ಟರ್, ಸುರಕ್ಷಿತ ಪ್ರವೇಶ ನಿಯಂತ್ರಣ ಹಾಗೂ ಕಟ್ಟುನಿಟ್ಟಿನ ಕಾರ್ಯವಿಧಾನಗಳನ್ನು ಅಳವಡಿಸಲಾಗಿದ್ದು, ಅಪಾಯಕಾರಕ ರೋಗಕಾರಕಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ನೆರವಾಗುತ್ತದೆ. ಪ್ರಮಾಣೀಕರಣ ಪ್ರಕ್ರಿಯೆಯ ಭಾಗವಾಗಿ ಪ್ರಯೋಗಾಲಯದ ವಿನ್ಯಾಸ, ಎಂಜಿನಿಯರಿಂಗ್ ವ್ಯವಸ್ಥೆಗಳು, ಬಯೋಸೇಫ್ಟಿ ನಿರ್ವಹಣೆ, ಕಾರ್ಯವಿಧಾನಗಳು, ಸಿಬ್ಬಂದಿ ಪರಿಣತಿ ಮತ್ತು ತುರ್ತು ಪರಿಸ್ಥಿತಿಗಳಿಗಿರುವ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ. ಎಂಐವಿ ನಿರ್ದೇಶಕರಾದ ಡಾ. ಚಿರಂಜಯ್ ಮುಖೋಪಾಧ್ಯಾಯ ಅವರ ನೇತೃತ್ವದಲ್ಲಿ ಬಿಎಸ್‌ಎಲ್-3 ಸೌಲಭ್ಯವನ್ನು ಸ್ಥಾಪಿಸಿ, ಯಶಸ್ವಿಯಾಗಿ ಪ್ರಮಾಣೀಕರಣ ಪಡೆಯಲಾಗಿದೆ. ಸಂಸ್ಥೆಯ ಉನ್ನತ ಸುರಕ್ಷತಾ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ.
ಈ ಮಹತ್ವದ ಮೈಲುಗಲ್ಲಿನೊಂದಿಗೆ ಸೋಂಕು ರೋಗಗಳ ಕುರಿತ ಸಂಶೋಧನೆ, ರೋಗಪತ್ತೆ ಹಾಗೂ ಸಾಮರ್ಥ್ಯ ವೃದ್ಧಿಗೆ ಪ್ರಮುಖ ಕೇಂದ್ರವಾಗಿ ಮಾಹೆ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಹೆಚ್ಚಿನ ಅಪಾಯಕಾರಿ ರೋಗಕಾರಕಗಳನ್ನು ಸುರಕ್ಷಿತವಾಗಿ ಪತ್ತೆ ಹಚ್ಚಲು, ಹೊಸದಾದ ಹಾಗೂ ಮರುಕಳಿಸುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ಸುಧಾರಿತ ರೋಗಪತ್ತೆ, ಮೇಲ್ವಿಚಾರಣೆ ಹಾಗೂ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ವೈದ್ಯರಿಗೆ ಈ ಬಿಎಸ್‌ಎಲ್-3 ಸೌಲಭ್ಯವು ನೆರವಾಗಲಿದೆ. ಮೈಕ್ರೋಬಯಾಲಜಿಸ್ಟ್‌ಗಳು, ವೈರಾಲಜಿಸ್ಟ್‌ಗಳು, ವೈದ್ಯರು, ಸಾಂಕ್ರಾಮಿಕ ರೋಗ ತಜ್ಞರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ನಡುವಿನ ಅಂತರಶಿಸ್ತೀಯ ಸಹಯೋಗಕ್ಕೆ ಈ ಪ್ರಯೋಗಾಲಯವು ಪ್ರಮುಖ ವೇದಿಕೆಯಾಗಲಿದೆ. ಅತ್ಯಾಧುನಿಕ ಸಂಶೋಧನೆಗಳಿಗೆ ಬೆಂಬಲ ನೀಡುವ ಜತೆಗೆ, ಈ ಪ್ರಯೋಗಾಲಯವು ಬಯೋಸೇಫ್ಟಿ ಕ್ರಮಗಳು, ಉನ್ನತ ಸುರಕ್ಷತಾ ಪ್ರಯೋಗಾಲಯಗಳ ನಿರ್ವಹಣೆ ಮತ್ತು ಸೋಂಕು ಹರಡುವಿಕೆಯನ್ನು ತಡೆಯುವ ತಂತ್ರಗಳಲ್ಲಿ ತರಬೇತಿ ನೀಡುವ ಮೂಲಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸನ್ನದ್ಧತೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ವಿ.ಎಸ್.ಎಂ. (ನಿವೃತ್ತ) ಅವರು, ‘ಬಿಎಸ್‌ಎಲ್-3 ಪ್ರಯೋಗಾಲಯಕ್ಕೆ ಪ್ರಮಾಣೀಕರಣ ದೊರೆತಿರುವುದು ಮಾಹೆಗೆ ಹೆಮ್ಮೆಯ ಹಾಗೂ ಮಹತ್ವದ ಕ್ಷಣವಾಗಿದೆ. ವೈಜ್ಞಾನಿಕ ಶ್ರೇಷ್ಠತೆ, ನವೀನತೆ ಮತ್ತು ಸಾರ್ವಜನಿಕ ಆರೋಗ್ಯದತ್ತ ಮಾಹೆಗಿರುವ ದೃಢ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಸುಧಾರಿತ ಸೌಲಭ್ಯವು ನಮ್ಮ ಸಂಶೋಧಕರಿಗೆ ಅಪಾಯಕಾರಿ ರೋಗಕಾರಕಗಳ ಕುರಿತು ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ಜವಾಬ್ದಾರಿಯೊಂದಿಗೆ ಅಧ್ಯಯನಗಳನ್ನು ನಡೆಸಲು ಹೆಚ್ಚಿನ ಶಕ್ತಿಯನ್ನು ನೀಡಲಿದೆ. ಅಷ್ಟೇ ಅಲ್ಲದೆ, ಭಾರತದ ಜೀವ ವೈದ್ಯಕೀಯ ಸಂಶೋಧನಾ ವ್ಯವಸ್ಥೆಯನ್ನು ವೃದ್ಧಿಪಡಿಸುವಲ್ಲಿ ಮತ್ತು ಜಾಗತಿಕ ಸಾಂಕ್ರಾಮಿಕ ರೋಗಗಳ ಸನ್ನದ್ಧತೆಗೆ ಕೊಡುಗೆ ನೀಡುವಲ್ಲಿ ಮಾಹೆಯ ಪಾತ್ರವನ್ನು ಇದು ಇನ್ನಷ್ಟು ಬಲಪಡಿಸುತ್ತದೆ’ ಎಂದು ಹೇಳಿದರು.
ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ʼವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿ ಜೀವವೈದ್ಯಕೀಯ ಸಂಶೋಧನೆಯಲ್ಲಿ ಮಾಹೆ ಹೊಂದಿರುವ ನಾಯಕತ್ವವನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. ಈ ಪ್ರಮಾಣೀಕರಣದೊಂದಿಗೆ, ಮಾಹೆ ಈಗ ಭಾರತದ ಅತ್ಯಂತ ಸುಧಾರಿತ ಬಿಎಸ್‌ಎಲ್-3 ಪ್ರಯೋಗಾಲಯ ಸೌಲಭ್ಯ ಹೊಂದಿರುವ ವಿಶ್ವವಿದ್ಯಾಲಯವಾಗಿದೆ. ಇದರಿಂದ ಪ್ರಮುಖ ಆರೋಗ್ಯ ಯೋಜನೆಗಳಲ್ಲಿ ಇತರ ಸಂಸ್ಥೆಗಳೊಂದಿಗೆ ಸಹಕಾರ ಹೆಚ್ಚಿಸುವುದರ ಜತೆಗೆ ತಜ್ಞರಿಗೆ ತರಬೇತಿ ನೀಡಲು ಸಾಧ್ಯವಾಗುತ್ತದೆ. ಎಲ್ಲ ಕಾರ್ಯಗಳನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ನಡೆಸಲೂ ಇದು ನೆರವಾಗಲಿದೆ’ ಎಂದರು.
ಪ್ರಮಾಣೀಕೃತ ಬಿಎಸ್‌ಎಲ್-3 ಸೌಲಭ್ಯಗಳನ್ನು ಹೊಂದಿರುವ ಭಾರತದ ಆಯ್ದ ಕೆಲ ಸಂಸ್ಥೆಗಳ ಪೈಕಿ ಮಾಹೆಯೂ ಒಂದಾಗಿದೆ. ಇದರಿಂದ ಜೀವವೈದ್ಯಕೀಯ ನವೀನತೆ, ಸೋಂಕು ರೋಗಗಳ ಸಂಶೋಧನೆ ಮತ್ತು ಜಾಗತಿಕ ಆರೋಗ್ಯ ಭದ್ರತೆಯಲ್ಲಿ ಮಾಹೆಯ ನಾಯಕತ್ವ ಮತ್ತಷ್ಟು ಪುಷ್ಟಿ ದೊರೆತಿದೆ.







