ಉಡುಪಿ, ಫೆ.20: ಪೆರ್ಡೂರು ಗ್ರಾಮದಲ್ಲಿ ಕರುವನ್ನು ಕದ್ದೊಯ್ದು ಕಸಾಯಿಖಾನೆಗೆ ಮಾರಾಟ ಮಾಡಲು ಮುಂದಾಗಿದ್ದ ಪ್ರಕರಣದಲ್ಲಿ ಹಿರಿಯಡಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ಪಾಡಿಗಾರಿನ ರಾಘವೇಂದ್ರ (36) ಹಾಗೂ ಪೆರ್ಡೂರು ಕುಂಜದಕಟ್ಟೆಯ ಸುಧೀಂದ್ರ ಶೆಟ್ಟಿ ಅಲಿಯಾಸ್ ಬಾಬು (36) ಎಂದು ತಿಳಿದುಬಂದಿದೆ.
ಫೆ. 17ರ ರಾತ್ರಿ ಸುಮಾರು 10.30ರ ವೇಳೆಗೆ ಪೆರ್ಡೂರು ದೇವಸ್ಥಾನದ ಎದುರಿನ ಹೊಲದಲ್ಲಿ ಇದ್ದ ಕರುವನ್ನು ಅಪಹರಿಸಿ, ಅದನ್ನು ಆಟೋ ರಿಕ್ಷಾದಲ್ಲಿ ಸಾಗಿಸಿ ಮಾರಾಟ ಮಾಡಲು ಯತ್ನಿಸಿದ್ದರೆಂಬ ಆರೋಪ ಎದುರಾಗಿದೆ. ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ–2020ರ ಕಲಂ 5 ಮತ್ತು 12ರಡಿ ಪ್ರಕರಣ ದಾಖಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ಸೂಚನೆ ಮೇರೆಗೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಿದ ಹಿರಿಯಡಕ ಪೊಲೀಸರು ಆರೋಪಿಗಳನ್ನು ಬಂಧಿಸಿ, ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







