ಬೆಂಗಳೂರು, ಫೆ. 13: ಈ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿಯ ಪಂದ್ಯಗಳನ್ನು ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಗುರುವಾರ ಸಂತಸದ ಸುದ್ದಿ ಲಭಿಸಿದೆ. ಈ ಬಾರಿ ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ನೇತೃತ್ವದ ಸಮಿತಿ, ಕೆಎಸ್‌ಸಿಎ, ಆರ್‌ಸಿಬಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದವು. ಗೃಹಸಚಿವರು ರಚಿಸಿರುವ ಪರಿಶೀಲನಾ ಸಮಿತಿ ಚಿನ್ನಸ್ವಾಮಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಳವಡಿಸಿಕೊಳ್ಳುತ್ತಿರುವ ಸುರಕ್ಷಾ ಕ್ರಮಗಳನ್ನು ಗಮನಿಸಿದ ಬಳಿಕ ಅದರ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಈ ಪರಿಶೀಲನಾ ವರದಿಯನ್ನಾಧರಿಸಿ ಸರ್ಕಾರ, ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿದೆ.
ತಿಂಗಳಾಂತ್ಯದಲ್ಲಿ ಐಪಿಎಲ್ ವೇಳಾಪಟ್ಟಿ?:
ಜೂನ್ 4ರಂದು ಚಿನ್ನಸ್ವಾಮಿ ಆವರಣದಲ್ಲಿ ಆರ್‌ಸಿಬಿಯ ಕಪ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವಿಗೀಡಾದ ಘಟನೆಯ ಬಳಿಕ ಚಿನ್ನಸ್ವಾಮಿಯಲ್ಲಿ ಪ್ರಮುಖ ಪಂದ್ಯಗಳನ್ನು ನಡೆಸಲು ಸರ್ಕಾರ, ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೆ, ಮೈದಾನದಲ್ಲಿ ಸುರಕ್ಷಾ ಕ್ಷಮಗಳನ್ನು ಅಳವಡಿಸುವಂತೆ ನ್ಯಾ.ಮೈಕಲ್ ಡಿ ಕುನ್ಹಾ ವರದಿಯಲ್ಲಿರುವ ಶಿಫಾರಸುಗಳನ್ನು ಪಾಲಿಸಲು ಕೆಎಸ್‌ಸಿಎ ಒಪ್ಪಿಕೊಂಡು, ಆ ಬಗ್ಗೆ ಕಾರ್ಯೋನ್ಮುಖವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಪಂದ್ಯ ನಡೆಸಲು ಸರ್ಕಾರ ಅನುಮತಿ ನೀಡಿದೆ.
ಆರ್‌ಸಿಬಿಯ ತಾಣ ನಿರ್ಧಾರವಾಗದ ಕಾರಣಕ್ಕೆ ಈ ಬಾರಿಯ ಐಪಿಎಲ್ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಸದ್ಯ ಆರ್‌ಸಿಬಿ ಪಂದ್ಯಕ್ಕೆ ತವರು ತಾಣದಲ್ಲಿ ಅವಕಾಶವಿರುವ ಕಾರಣ, ಮಾ.26ರಿಂದ ನಡೆಯುವ ಸಾಧ್ಯತೆಯಿರುವ ಐಪಿಎಲ್ ಸಂಬಂಧ ಫೆಬ್ರವರಿ ತಿಂಗಳಾಂತ್ಯದಲ್ಲಿ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.
ಸರ್ಕಾರದ ಷರತ್ತುಗಳೇನು?
35,000 ಮಂದಿ ಪ್ರೇಕ್ಷಕರು: ಪಂದ್ಯಗಳ ವೇಳೆ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆ ಮೀರಬಾರದು.
– ಸುರಕ್ಷಾ ಸೌಲಭ್ಯಗಳು: ಅಂಬುಲೆನ್ಸ್ ಓಡಾಟಕ್ಕೆ ಜಾಗ, ಪಾರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್‌ಗಳು ಇತ್ಯಾದಿಗಳನ್ನು ಸೌಲಭ್ಯಗಳನ್ನು ಪೂರೈಸಬೇಕು.
– ತಪ್ಪಿದರೆ ಮರು ನಿರ್ಧಾರ?: ಸರ್ಕಾರದ ಮಾರ್ಗಸೂಚಿ ಪಾಲಿಸುವಲ್ಲಿ ತಪ್ಪಿದರೆ ಪಂದ್ಯದ ಅನುಮತಿ ಮರುಪರಿಶೀಲನೆ ಮಾಡುವುದಾಗಿಯೂ ಸರ್ಕಾರ ಎಚ್ಚರಿಸಿದೆ ಎನ್ನಲಾಗಿದೆ.
9 ತಿಂಗಳ ಬಳಿಕ ಮತ್ತೆ ಚಿನ್ನಸ್ವಾಮಿಗೆ ಐಪಿಎಲ್?
ಈ ಬಾರಿಯ ಐಪಿಎಲ್ ವೇಳೆ (ಮಾರ್ಚ್‌ನಲ್ಲಿ) ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆದರೆ 9 ತಿಂಗಳ ಬಳಿಕ ಐಪಿಎಲ್ ಅಥವಾ ಪ್ರಮುಖ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆದಂತಾಗುತ್ತದೆ.
ಏಕೆಂದರೆ ಕಳೆದ ಜೂನ್ನಲ್ಲಿ ಕಾಲ್ತುಳಿತ ದುರಂತ ನಡೆದ ಬಳಿಕ ಚಿನ್ನಸ್ವಾಮಿಯಲ್ಲಿ ಯಾವುದೇ ಪ್ರಮುಖ ಪಂದ್ಯಗಳನ್ನು ನಡೆದಿಲ್ಲ. ಇಲ್ಲಿ ನಿಗದಿಯಾಗಿದ್ದ ವನಿತಾ ವಿಶ್ವಕಪ್, ವಿಜಯ್ ಹಜಾರೆ ಪಂದ್ಯಗಳೂ ಸ್ಥಳಾಂತರ ಆಗಿದ್ದವು.







