ಉಡುಪಿ, ಫೆಬ್ರವರಿ 12: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಲೇಬರ್ ಕೋಡ್‌ಗಳನ್ನು ಹಿಂಪಡೆಯಬೇಕು ಹಾಗೂ ಕರ್ನಾಟಕ ಸರ್ಕಾರವು ಏಪ್ರಿಲ್ 1ರಿಂದ ಅವುಗಳನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಉಡುಪಿಯಲ್ಲಿ ಇಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
ನಗರದಲ್ಲಿ ನಡೆದ ಪ್ರತಿಭಟನಾ ಸಭೆಯ ನಂತರ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜೊಡುಕಟ್ಟೆ ಬಳಿ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಕಾರ್ಮಿಕ ವಿರೋಧಿ ನೀತಿಗಳನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನಂತರ ಸಹಬಾಳ್ವೆ ಉಡುಪಿ ಸಂಚಾಲಕ ಫಣಿರಾಜ್, ಡಿ.ಎಸ್.ಎಸ್ ಮುಖಂಡ ಸುಂದರ್ ಮಾಸ್ಟರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸೇರಿದಂತೆ ಹಲವರು ಮಾತನಾಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಒಕ್ಕೂಟವಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ AIBEA ಮುಖಂಡ ನಾಗೇಶ್, INTUC ಮುಖಂಡ ಕಿರಣ್ ಹೆಗ್ಡೆ, ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸಂಜೀವ ಬಳ್ಕೂರು, AITUC ಮುಖಂಡೆ ಶಶಿಕಲಾ, ಅಂಗನವಾಡಿ ಸಂಘ ಜಿಲ್ಲಾ ಅಧ್ಯಕ್ಷೆ ಭಾರತಿ ಎಸ್, ಬಿಸಿಯೂಟ ಸಂಘದ ಅಧ್ಯಕ್ಷೆ ರತ್ನ, ಬೀಡಿ ಕಾರ್ಮಿಕ ಮುಖಂಡ ಉಮೇಶ್ ಕುಂದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು JCTU ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಎಸ್ ಕಾಂಚನ್ ನಿರೂಪಿಸಿದರು. AITUC ಮುಖಂಡ ಶಿವಾನಂದ ವಂದನಾರ್ಪಣೆ ಮಾಡಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಕ್ಷಿಸುವಂತೆ ಹಾಗೂ ಅಂಗನವಾಡಿ ಮತ್ತು ಬಿಸಿಯೂಟ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.







